ಆಲಪುಯ: 2004ರಲ್ಲಿ ಗುಜರಾತ್ ರಾಜ್ಯದಲ್ಲಿ ನಡೆದ ಇಶ್ರತ್ ಜಹಾನ್ ನಕಲಿ ಎನ್'ಕೌಂಟರ್'ನಲ್ಲಿ ಮೃತಪಟ್ಟ ಜಾವೇದ ಗುಲಾಂ ಶೇಖ್ ಅಲಿಯಾಸ್ ಪ್ರಾಣೇಶ್ ಕುಮಾರ್ ಪಿಳ್ಳೈ ಅವರ ತಂದೆ ಗೋಪಿನಾಥ್ ಪಿಳ್ಳೈ (77) ಅವರು ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ.
ಪಿಳ್ಳೈ ಅವರು ಸಂಬಂಧಿಕರೊಂದಿಗೆ ಬುಧವಾರ ಕಾರಿನಲ್ಲಿ ಹೋಗುತ್ತಿದ್ದರು. ವಯಲಾರ್ ಜಂಕ್ಷನ್ ಬಳಿ ಬರುತ್ತಿದ್ದ ಸಂದರ್ಭದಲ್ಲಿ ಲಾರಿಯೊಂದು ಕಾರಿಗೆ ರಭಸದಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಪಿಳ್ಳೈ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವನ್ನು ಕೊಚ್ಚಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ಪಿಳ್ಳೈ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಚಾಲಕ ಇದ್ದಕ್ಕಿದ್ದಂತೆಯೇ ಬ್ರೇಕ್ ಹಾಕಿದ್ದಾನೆ. ಈ ವೇಳೆ ವೇಗವಾಗಿ ಬರುತ್ತಿದ್ದ ಲಾರಿ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಪಿಳ್ಳೈ ಅವರು ಗಂಭೀರವಾಗಿ ಗಾಯಗೊಂಡಿದ್ದರು ಎಂದು ಸಬ್ ಇನ್ಸ್ ಪೆಕ್ಟರ್ ಬಿ ಶಜಿಮೊನ್ ಅವರು ತಿಳಿಸಿದ್ದಾರೆ.
ಉದ್ದೇಶಪೂರ್ವಕವಾಗಿಯೇ ಪಿಳ್ಳೈ ಅವರನ್ನು ಅಪಘಾತದ ಮೂಲಕ ಹತ್ಯೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಈ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದಿದ್ದಾರೆ.
ಪ್ರಾಣೇಶ್ ನೆರೆಮನೆಯ ಶಾಜಿದಾ ಅಲಿಯಾಸ್ ಇಶ್ರತ್ ಜಹಾನ್'ಳನ್ನು ಪ್ರೀತಿಸಿ 1991ರಲ್ಲಿ ವಿವಾಹವಾಗಿದ್ದ. ಇಶ್ರತ್ ಮುಂಬೈ ನಿವಾಸಿಯಾಗಿದ್ದಳು. ವಿವಾಹದ ಬಳಿಕ ಶಾಜಿದಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಳು. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದರು. ಪ್ರಾಣೇಶ್ ತಂದೆ ಗೋಪಿನಾಥ್ ಪಿಳ್ಳೈ ಅವರನ್ನು ಭೇಟಿ ಮಾಡುವ ಸಲುವಾಗಿ ದಂಪತಿಗಳು ಆಗಾಗ ಆಲಪುಯದ ಥಮರಕುಲಂಗೆ ಭೇಟಿ ನೀಡುತ್ತಿದ್ದರು.
ಪ್ರಾಣೇಶ್ ಅಲಿಯಾಸ್ ಜಾವೇದ್, ಇಶ್ರತ್ ಇಬ್ಬರೂ ಅಮ್ಜಾದ್ ಅಲಿ ಎಂಬ ಪಾಕಿಸ್ತಾನ ಮತ್ತು ಜಿಶಾನ್ ಜೊಹಾರ್ ಘನಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಸದಸ್ಯರಾಗಿದ್ದು, ಅಂದಿನ ಗುಜರಾತ್ ರಾಜ್ಯ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಗುಜರಾತ್ ಪೊಲೀಸರು ಹೇಳಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos