'ಕ್ಯಾಂಡಲ್ ಲೈಟ್ ಮಾರ್ಚ್' ವೇಳೆ ನೂಕುನುಗ್ಗಲು: ಜನಜಂಗುಳಿಯ ದುರ್ವರ್ತನೆಗೆ ಸಿಟ್ಟಿಗೆದ್ದ ಪ್ರಿಯಾಂಕಾ ವಾದ್ರಾ
ನವದೆಹಲಿ: ಕತುವಾ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳ ವಿರುದ್ದ ಪ್ರತಿಭಟನೆ ನಡೆಸುವ ಸಲುವಾಗಿ ಗುರುವಾರ ಮಧ್ಯರಾತ್ರಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿದ್ದ ಕ್ಯಾಂಡಲ್ ಲೈಟ್ ಮಾರ್ಚ್' ವೇಳೆ ನೂಕುನುಗ್ಗಲು ಏರ್ಪಟ್ಟಿದ್ದು, ಇದಕ್ಕೆ ಪ್ರಿಯಾಂಕಾ ಅವರು ತೀವ್ರವಾಗಿ ಕೆಂಡಾಮಂಡಲಗೊಂಡಿದ್ದರು ಎಂದು ವರದಿಗಳು ತಿಳಿಸಿವೆ.
ಪ್ರತಿಭಟನೆ ವೇಳೆ ಜನರು ರಾಹುಲ್ ಅವರ ಸಹೋದರಿ ಪ್ರಿಯಾಂಕಾ ಅವರನ್ನೂ ತಳ್ಳಿದ್ದು, ಜನಜಂಗುಳಿಯ ಈ ದುರ್ವರ್ತನೆಗೆ ಪ್ರಿಯಾಂಕಾ ಅವರು ತೀವ್ರವಾಗಿ ಸಿಟ್ಟಿಗೆದ್ದಿದ್ದಾರೆ. ನಾವು ಯಾವ ಕಾರಣಕ್ಕಾಗಿ ಇಲ್ಲಿ ಸೇರಿದ್ದೇವೆಂಬುದನ್ನು ನೆನಪಿಟ್ಟುಕೊಂಡು ಸಂಯದಿಂದ ವರ್ತಿಸಿ ಎಂದು ಏರು ಧ್ವನಿಯಲ್ಲಿ ಹೇಳಿದ್ದಾರೆ.
ತಳ್ಳಾಟ ನಡೆಸುತ್ತಿರುವವರು ತಮ್ಮ ಮನೆಗಳಿಗೆ ಹೋಗಬೇಕು. ಜನರು ಸ್ವಲ್ಪ ಸಂಯಮದಿಂದ ನಡೆದುಕೊಳ್ಳಿ, ಮೌನವಾಗಿ ಸಾಗಿ ಎಂದು ಸಿಟ್ಟಿನಿಂದ ಗುಡುಗಿದ್ದಾರೆಂದು ತಿಳಿದುಬಂದಿದೆ.
ಜಮ್ಮುವಿನ ಕತುವಾದಲ್ಲಿ ನಡೆದಿದ್ದ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ, ಕೊಲೆ ಹಾಗೂ ಉತ್ತರಪ್ರದೇಶದ ಉನ್ನಾವೋದಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ರಾಜಧಾನಿ ದೆಹಲಿಯ ಇಂಡಿಯಾ ಗೇಟ್ ಬಳಿ ತಡರಾತ್ರಿ ರಾಹುಲ್ ಗಾಂಧಿ ಸೇರಿ ಇನ್ನಿತರೆ ನಾಯಕರು ಕ್ಯಾಂಡಲ್ ಲೈಟ್ ಮಾರ್ಚ್ ನಡೆಸಿದರು. ಈ ಪ್ರತಿಭಟನೆಯಲ್ಲಿ ಸಾಕಷ್ಟು ಜನರು ಭಾಗಿಯಾಗಿದ್ದರು.
ಈ ಜಾಥಾದಲ್ಲಿ ರಾಹುಲ್ ಆವರದೊಂದಿಗೆ ಪ್ರಿಯಾಂಕಾ ಹಾಗೂ ಅವರ ಪತಿ ರಾಬರ್ಟ್ ವಾದ್ರಾ ಅವರೂ ಕೂಡ ಸಾಥ್ ನೀಡಿದ್ದರು.