ದೇಶ

ಕತುವಾ ಪ್ರಕರಣ: ಮತೀಯ ಶಕ್ತಿಗಳನ್ನು ಮೆಟ್ಟಿ ನಿಂತ ಜಮ್ಮು ಜನತೆ ಕುರಿತು ಮೆಹಬೂಬಾ ಮುಫ್ತಿ ಶ್ಲಾಘನೆ

Manjula VN
ಶ್ರೀನಗರ: ಕತುವಾ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರ ಸಂತ್ರಸ್ತ ಬಾಲಕಿಯ ನ್ಯಾಯಕ್ಕಾಗಿ ಕೋಮುಶಕ್ತಿಗಳ ಮೆಟ್ಟಿನಿಂತ ಜಮ್ಮು ಜನತೆಯನ್ನು ಕುರಿತು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಶನಿವಾರ ಶ್ಲಾಘಿಸಿದ್ದಾರೆ. 
ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಪುಟ್ಟ ಬಾಲಕಿಯ ನ್ಯಾಯಕ್ಕಾಗಿ ಕೋಮು ಶಕ್ತಿಗಳನ್ನು ಮೆಟ್ಟಿನಿಂತ ಜಮ್ಮುವಿನ ಜನತೆಯನ್ನು ಶ್ಲಾಘಿಸುತ್ತೇನೆಂದು ಹೇಳಿದ್ದಾರೆ. 
ಜಮ್ಮು ಮತ್ತು ಕಾಶ್ಮೀರ ಜನತೆ ಒಗ್ಗಟಿನಿಂದ ನಿಂತು ಜಾತ್ಯಾತೀತ ಏಕತೆ ಮತ್ತು ನೀತಿಯನ್ನು ಪ್ರೇರೇಸಿಸುವಲ್ಲಿ ಇತರರಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಾರೆಂಬ ನನ್ನ ನಂಬಿಕೆ ಇದರಿಂದ ಬಲಬಂದಂತಾಗಿದೆ ಎಂದು ತಿಳಿಸಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಮೆಹಬೂಬಾ ಮುಫ್ತಿಯವರು, ಅಪ್ರಾಪ್ತರ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸಲು ಹೊಸ ಕಾನೂನನ್ನು ಜಾರಿದಗೆತ ತರಲಾಗುವುದು ಎಂದು ಹೇಳಿದ್ದರು. 
ಈ ರೀತಿ ಮತ್ತೊಂದು ಮಗುವಿಗೆ ಘಟಿಸಲು ನಾವು ಅವಕಾಶ ನೀಡುವುದಿಲ್ಲ. ಅಪ್ರಾಪ್ತರ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸುವ ಹೊಸ ಕಾನೂನ್ನು ಜಾರಿಗೆ ತರುತ್ತೇವೆ. ಆಸೀಫಾಳ ಪ್ರಕರಣವೇ ಕೊನೆಯ ಪ್ರಕರಣವಾಗಲಿ ಎಂದು ತಿಳಿಸಿದ್ದರು. 
ಕಾಶ್ಮೀರದ ಕತುವಾದಲ್ಲಿ ನಡೆದಿದ್ದ 8 ವರ್ಷದ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನ್ಯಾಯಾಲಯದ ವಿಚಾರಣೆಗೆ ವಕೀಲರು ಅಡ್ಡಿಪಡಿಸುತ್ತಿರುವುದಕ್ಕೆ ನಿನ್ನೆಯಷ್ಟೇ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿತ್ತು. ಅಲ್ಲದೆ, ಈ ಬಗ್ಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಸೇರಿದಂತೆ ಸಂಬಂಧಿಸಿದ ವಕೀಲರ ಸಂಘಗಳಿಂದ ವಿವರಣೆಯನ್ನೂ ಕೇಳಿತ್ತು. 
ಜಮ್ಮು ಕಾಶ್ಮೀರದ ಸ್ಥಳೀಯ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಮೃತ ಬಾಲಕಿಯ ಪರ ವಕೀಲರು ಹಾಜರಾಗುವುದಕ್ಕೆ ವಕೀಲರು ಅಡ್ಡಿಪಡಿಸುತ್ತಿದ್ದಾರೆಂದು ಶುಕ್ರವಾರ ಸುಪ್ರೀಂಕೋರ್ಟ್ ಕಲಾಪದ ವೇಳೆ ಹಿರಿಯ ವಕೀಲರು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಮಾಹಿತಿ ನೀಡಿದ್ದರು. 
ಇದನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡ ನ್ಯಾಯಪೀಠ, ಜಮ್ಮು ಮತ್ತು ಕಾಶ್ಮೀರ ಸರ್ಕಾರದ ವಕೀಲರಿಗೆ ಬುಲಾವ್ ತಿಳಿಸಿ, ಅವರಿಂದ ವಿವರಣೆ ಪಡೆದುಕೊಂಡಿತು. ಬಳಿಕ ನ್ಯಾಯಾಲಯ ಕಲಾಪಕ್ಕೆ ಯಾರೂ ಅಡ್ಡಿಪಡಿಸಬಾರದು ಎಂದು ನಿರ್ದೇಶನ ನೀಡಿ, ಪ್ರಕರಣದ ಬಗ್ಗೆ ಏ.17 ರಂದು ಪ್ರತಿಕ್ರಿಯೆ ನೀಡುವುಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ, ಸ್ಟೇಟ್ ಬಾರ್ ಕೌನ್ಸಿಲ್, ಜಮ್ಮು ಹೈಕೋರ್ಟ್ ಬಾರ್ ಕೌನ್ಸಿಲ್ ಹಾಗೂ ಕತುವಾ ಜಿಲ್ಲಾ ವಕೀಲರ ಸಂಘಕ್ಕೆ ತಾಕೀತು ಮಾಡಿತು. 
SCROLL FOR NEXT