ದೇಶ

ಕತುವಾ ಅತ್ಯಾಚಾರ: ನನ್ನನ್ನೂ ಅತ್ಯಾಚಾರ ಮಾಡಿ, ಹತ್ಯೆ ಮಾಡಬಹುದು- ಸಂತ್ರಸ್ತೆ ಬಾಲಕಿ ಪರ ವಕೀಲೆ

Manjula VN
ನವದೆಹಲಿ; ನನ್ನನ್ನೂ ಅತ್ಯಾಚಾರ ಮಾಡಿ, ಹತ್ಯೆ ಮಾಡಬಹುದು ಕತುವಾ ಅತ್ಯಾಚಾರ ಸಂತ್ರಸ್ತ ಬಾಲಕಿಯ ಪರ ವಕೀಲೆ ದೀಪಿಕಾ ಸಿಂಗ್ ರಾಜವತ್ ಅವರು ಭಾನುವಾರ ಹೇಳಿದ್ದಾರೆ. 
ಜೀವ ಭಯ ಕುರಿತಂತೆ ಪ್ರತಿಕ್ರಿಯೆ ನೀಡಿಲುವ ವಕೀಲೆ ದೀಪಿಕಾ ಸಿಂಗ್ ರಾಜವತ್ ಅವರು, ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡದಂತೆ ಮಾಡಲು ನನ್ನನ್ನೂ ಅತ್ಯಾಚಾರ ಮಾಡಿ, ಹತ್ಯೆ ಮಾಡಬಹುದು ಎಂದು ಹೇಳಿದ್ದಾರೆ. 
ಕೆಲವರು ನನ್ನನ್ನು ಹಿಂದೂ ವಿರೋಧಿ ಎಂದು ಕರೆದು, ಸಾಮಾಜಿಕವಾಗಿ ಬಹಿಷ್ಕರಿಸಿದ್ದಾರೆ. ಪ್ರಸ್ತುತ ನನಗೆ ಜೀವ ಭಯವಿದ್ದು, ನನಗೆ ಹಾಗೂ ನನ್ನ ಕುಟುಂಬಕ್ಕೆ ಭದ್ರತೆ ನೀಡುವಂತೆ ಸುಪ್ರೀಂಕೋರ್ಟ್ ಮೊರೆ ಹೋಗುತ್ತೇನೆಂದು ತಿಳಿಸಿದ್ದಾರೆ. 
ಪರಿಸ್ಥಿತಿಗಳು ನನಗೆ ಭಯವನ್ನು ಹುಟ್ಟಿಸುತ್ತಿದೆ. ಇದು ನಿಜಕ್ಕೂ ದುರಾದೃಷ್ಟಕರ. ನನ್ನ ಪರಿಸ್ಥಿತಿಯನ್ನು ನೀವು ಊಹಿಸಬಹುದು. ಆದರೆ, 8 ವರ್ಷದ ಬಾಲಕಿಯ ನ್ಯಾಯಕ್ಕಾಗಿ ನಾನು ಹೋರಾಡುತ್ತೇನೆಂದಿದ್ದಾರೆ. 
ಕಾಶ್ಮೀರದ ಕತುವಾದಲ್ಲಿ ನಡೆದಿದ್ದ 8 ವರ್ಷದ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನ್ಯಾಯಾಲಯದ ವಿಚಾರಣೆಗೆ ವಕೀಲರು ಅಡ್ಡಿಪಡಿಸುತ್ತಿರುವುದಕ್ಕೆ ಕೆಲ ದಿನಗಳ ಹಿಂದಷ್ಟೇ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿತ್ತು. ಅಲ್ಲದೆ, ಈ ಬಗ್ಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಸೇರಿದಂತೆ ಸಂಬಂಧಿಸಿದ ವಕೀಲರ ಸಂಘಗಳಿಂದ ವಿವರಣೆಯನ್ನೂ ಕೇಳಿತ್ತು. 
ಜಮ್ಮು ಕಾಶ್ಮೀರದ ಸ್ಥಳೀಯ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಮೃತ ಬಾಲಕಿಯ ಪರ ವಕೀಲರು ಹಾಜರಾಗುವುದಕ್ಕೆ ವಕೀಲರು ಅಡ್ಡಿಪಡಿಸುತ್ತಿದ್ದಾರೆಂದು ಶುಕ್ರವಾರ ಸುಪ್ರೀಂಕೋರ್ಟ್ ಕಲಾಪದ ವೇಳೆ ಹಿರಿಯ ವಕೀಲರು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಮಾಹಿತಿ ನೀಡಿದ್ದರು. 
ಇದನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡ ನ್ಯಾಯಪೀಠ, ಜಮ್ಮು ಮತ್ತು ಕಾಶ್ಮೀರ ಸರ್ಕಾರದ ವಕೀಲರಿಗೆ ಬುಲಾವ್ ತಿಳಿಸಿ, ಅವರಿಂದ ವಿವರಣೆ ಪಡೆದುಕೊಂಡಿತು. ಬಳಿಕ ನ್ಯಾಯಾಲಯ ಕಲಾಪಕ್ಕೆ ಯಾರೂ ಅಡ್ಡಿಪಡಿಸಬಾರದು ಎಂದು ನಿರ್ದೇಶನ ನೀಡಿ, ಪ್ರಕರಣದ ಬಗ್ಗೆ ಏ.17 ರಂದು ಪ್ರತಿಕ್ರಿಯೆ ನೀಡುವುಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ, ಸ್ಟೇಟ್ ಬಾರ್ ಕೌನ್ಸಿಲ್, ಜಮ್ಮು ಹೈಕೋರ್ಟ್ ಬಾರ್ ಕೌನ್ಸಿಲ್ ಹಾಗೂ ಕತುವಾ ಜಿಲ್ಲಾ ವಕೀಲರ ಸಂಘಕ್ಕೆ ತಾಕೀತು ಮಾಡಿತು. 
SCROLL FOR NEXT