ದೇಶ

ಹೆದ್ದಾರಿಯಲ್ಲಿ ಟೋಲ್ ಕಟ್ಟಲು ಇನ್ನು ವಾಹನ ನಿಲ್ಲಿಸಬೇಕಿಲ್ಲ, ಶೀಘ್ರ ಬ್ಯಾಂಕ್ ಖಾತೆಯಿಂದಲೇ ಕಡಿತ!

Srinivasamurthy VN
ನವದೆಹಲಿ: ಇನ್ನು ಮುಂದೆ ಟೋಲ್ ಗಳಲ್ಲಿ ವಾಹನಗಳನ್ನು ನಿಲ್ಲಿಸಿ ಶುಲ್ಕ ಪಾವತಿಸಬೇಕಿಲ್ಲ. ನೇರವಾಗಿ ಬ್ಯಾಂಕ್ ಖಾತೆಯಿಂದ ಶುಲ್ಕ ಕಡಿತಗೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ಬಗ್ಗೆ ಸ್ವತಃ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಾಹಿತಿ ನೀಡಿದ್ದು, ಸರ್ಕಾರ ಟೋಲ್ ಗಳಲ್ಲಿ ಸುಗಮ ಸಂಚಾರಕ್ಕೆ ಹೊಸ ವ್ಯವಸ್ಥೆಯನ್ನು ತರಲು ಮುಂದಾಗಿದೆ ಎಂದು ಮಾಹಿತಿ ನೀಡಿದ್ದಾರೆ. 
ಸರ್ಕಾರದ ಈ ಹೊಸ ವ್ಯವಸ್ಥೆಯಲ್ಲಿ ಚಾಲಕರು ವಾಹನಗಳನ್ನು ಟೋಲ್ ಗಳಲ್ಲಿ ಗಂಟೆಗಟ್ಟಲೆ ನಿಲ್ಲಿಸುವ ಅನಿವಾರ್ಯತೆ ಇಲ್ಲ. ಟೋಲ್ ಬೂತ್ ಗಳಲ್ಲಿ ಅಳವಡಿಸಲಾಗುವ ನೂತನ ವ್ಯವಸ್ಥೆಯಿಂದಾಗಿ ವಾಹನ ಮಾಲೀಕರ ಬ್ಯಾಕ್ ಖಾತೆಯಿಂದಲೇ ನೇರವಾಗಿ ಹಣ ಜಮೆಯಾಗಲಿದೆ. ಈಗಾಗಲೇ ಇಂತಹ ವ್ಯವಸ್ಥೆ ದಕ್ಷಿಣ ಕೊರಿಯಾದಲ್ಲಿ ಜಾರಿಯಲ್ಲಿದ್ದು, ಇದೇ ವ್ಯವಸ್ಥೆಯನ್ನು ಭಾರತದಲ್ಲೂ ಅಳವಡಿಸಲಾಗುತ್ತದೆ ಎಂದು ಕೇಂದ್ರ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. 
ಗುರು ಗ್ರಾಮದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ನಿತಿನ್ ಗಡ್ಕರಿ, ಮುಂಬರುವ ಮೇ ತಿಂಗಳಿನಲ್ಲಿ ದಕ್ಷಿಣ ಕೊರಿಯಾದ ಅಧ್ಯಕ್ಷ ಭಾರತಕ್ಕೆ ಭೇಟಿ ನೀಡಲಿದ್ದು, ಅವರ ಭೇಟಿ ವೇಳೆ ಹೊಸ ವ್ಯವಸ್ಥೆ ತಿಳುವಳಿಕಾ ಪತ್ರಕ್ಕೆ(ಎಂಒಯು) ಭಾರತ ಮತ್ತು ದಕ್ಷಿಣ ಕೊರಿಯಾ ದೇಶಗಳ ಅಧಿಕಾರಿಗಳು ಸಹಿ ಹಾಕಲಿವೆ. ಹೊಸ ವ್ಯವಸ್ಥೆಯಿಂದಾಗಿ ಟೋಲ್ ಗಳಲ್ಲಿ ವಾಹನ ಸಂಚಾರ ಸುಗುಮವಾಗಲಿದೆ. ಮೆಟ್ರೊ ಸಿಟಿಗಳಲ್ಲಿರುವ ಟೋಲ್ ಗಳಲ್ಲಿ ಹೆಚ್ಚು ಸಂಚಾರ ದಟ್ಟಣೆ ಇರುತ್ತದೆ. ಹಾಗಾಗಿ ಆರಂಭದಲ್ಲಿ ಮೆಟ್ರೋ ನಗರದಲ್ಲಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರುವ ನಿರ್ಧಾರ ಮಾಡಿದ್ದೇವೆ ಇದರಿಂದ ಟೋಲ್ ಗಳಲ್ಲಿ ಸಂಚಾರ ಸುಗುಮವಾಗಲಿದೆ ಎಂದು ತಿಳಿಸಿದರು.
SCROLL FOR NEXT