ದೇಶ

ದೇಶ ಬಿಟ್ಟು ಹೋಗುವ ಸುಸ್ತಿದಾರರ ಆಸ್ತಿ ಜಪ್ತಿ: ಸುಗ್ರೀವಾಜ್ಞೆಗೆ ಕೇಂದ್ರ ಸಂಪುಟ ಒಪ್ಪಿಗೆ

Nagaraja AB

ನವದೆಹಲಿ : ದೇಶ ಬಿಟ್ಟು ಹೋಗುವ ಸುಸ್ತಿದಾರರ ಆಸ್ತಿ ಜಪ್ತಿಗೆ ಅವಕಾಶ ಕಲ್ಪಿಸುವ 2018ರ ಸುಗ್ರೀವಾಜ್ಞೆಗೆ  ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟದಲ್ಲಿ ಈ ಸುಗ್ರೀವಾಜ್ಞೆಗೆ ಸಮ್ಮತಿ ನೀಡಲಾಯಿತು ಎಂದು ಮೂಲಗಳಿಂದ ತಿಳಿದುಬಂದಿದೆ.

ದೇಶ ಬಿಟ್ಟು ಹೋಗುವ ಸುಸ್ತಿದಾರರ ಮಸೂದೆಯನ್ನು ಲೋಕಸಭೆಯಲ್ಲಿ ಮಾರ್ಚ್ 12 ರಂದು ಮಂಡಿಸಲಾಗಿತ್ತು. ಆದರೆ. ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಸಂಸತ್ತಿನ ಕಾರ್ಯಕಲಾಪ ನಡೆಯದ ಹಿನ್ನೆಲೆಯಲ್ಲಿ ಮಸೂದೆ ಅನುಮೋದನೆಯಾಗಿರಲಿಲ್ಲ.

 ಈ ಸುಗ್ರೀವಾಜ್ಞೆಯಿಂದ ನೀರವ್ ಮೋದಿ ತರಹದ ದೇಶ ಬಿಟ್ಟು ಹೋಗುವ ಸುಸ್ತಿದಾರರ ಆಸ್ತಿ ಜಪ್ತಿ ಮಾಡಿಕೊಳ್ಳಲು ನೆರವಾಗಲಿದೆ. ರಾಷ್ಟ್ರಪತಿಗಳ ಅನುಮೋದನೆ ನಂತರ ಈ ಸುಗ್ರೀವಾಜ್ಞೆ ಜಾರಿಗೆ ಬರಲಿದೆ.

100 ಕೋಟಿ ರೂ. ಮೊತ್ತದ ಬ್ಯಾಂಕ್ ಸಾಲ ಪಡೆದು ಮರುಪಾವತಿಸದ ವ್ಯಕ್ತಿಗಳ ವಿರುದ್ಧ ಬಂಧನ ವಾರೆಂಟ್ ಹೊರಡಿಸಲು ಈ ಸುಗ್ರೀವಾಜ್ಞೆಯಲ್ಲಿ ವಿನಾಯಿತಿ ಇದೆ. ಅಲ್ಲದೇ ಆರೋಪಿಯ ಗಮನಕ್ಕೆ ಬಾರದೆ ಆತನ ಆಸ್ತಿ ಪಾಸ್ತಿ ಜಪ್ತಿ ಮಾಡಬಹುದಾಗಿದೆ.

 ಹಣ ವರ್ಗಾವಣೆ ಕಾಯ್ದೆ -ಪಿಎಂಎಲ್ ಎ ಅಡಿಯಲ್ಲಿ ಇಂತಹ ಸುಸ್ತಿದಾರನ್ನು ತಡೆಗಟ್ಟಬಹುದು , ನಕಲಿ ಛಾಪಾ ಕಾಗದ,  ನಗದು,  ಹಣ ವರ್ಗಾವಣೆ ,ಮತ್ತಿತರ ಅಪರಾಧವೆಸಗುವ ವ್ಯಕ್ತಿಗಳ ವಿರುದ್ಧ ಬಂಧನ ವಾರೆಂಟ್ ಹೊರಡಿಸಬಹುದಾಗಿದೆ.

ಸುಸ್ತಿದಾರರು ದೇಶ ಬಿಟ್ಟು ಹೋಗದಂತೆ ತಡೆಗಟ್ಟಿ ಕಾನೂನು ಕ್ರಮ ಜರುಗಿಸಬಹುದಾಗಿದೆ. ಅಲ್ಲದೇ ಬೇನಾಮಿ ಆಸ್ತಿಪಾಸ್ತಿ ಅಥವಾ ವಿದೇಶದಲ್ಲಿ ಹೊಂದಿರುವ ಆಸ್ತಿ ಬಗ್ಗೆಗೂ ಮಾಹಿತಿ ಪಡೆಯಬಹುದಾಗಿದೆ.




SCROLL FOR NEXT