ಪಾಟ್ನಾ : ಬಿಹಾರ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ರಾಬ್ಡಿದೇವಿ ಸೇರಿದಂತೆ ಇಬ್ಬರು ಆರ್ ಜೆಡಿ ಸದಸ್ಯರು ಹಾಗೂ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಪುತ್ರ ಗೆಲುವು ಸಾಧಿಸಿದ್ದಾರೆ.
ಇದರಿಂದಾಗಿ ರಾಬ್ಡಿದೇವಿ ಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕಿಯಾಗುವ ಅವಕಾಶ ಇದೆ. 75 ಸದಸ್ಯ ಬಲದ ಬಿಹಾರ ವಿಧಾನ ಪರಿಷತ್ತಿನ 11 ಸ್ಥಾನಗಳ ಫಲಿತಾಂಶ ಹೊರಬಿದ್ದಿದ್ದು, ಆರ್ ಜೆಡಿಎ 9 ಸದಸ್ಯರು ಜಯ ಗಳಿಸಿದ್ದಾರೆ.
ಆರ್ ಜೆಡಿಯ ನೆರವಿನಿಂದ ಮಾಜಿ ಮುಖ್ಯಮಂತ್ರಿ ಜಿತಿನ್ ರಾಮ್ ಮಾಂಝಿ ಅವರ ಪುತ್ರ ಸಂತೋಷ್ ಮಾಂಝಿ ಕೂಡಾ ಗೆಲುವು ಸಾಧಿಸಿದ್ದಾರೆ. ವಿಧಾನಪರಿಷತ್ತಿನ ನಾಯಕರಾಗಲು 10 ಸದಸ್ಯ ಬಲದ ಅಗತ್ಯವಿದೆ.
ರಾಬ್ಡಿದೇವಿ ಪುತ್ರ ತೇಜಸ್ವಿ ಯಾದವ್ ವಿಧಾನಸಭೆ ಪ್ರತಿಪಕ್ಷದ ನಾಯಕರಾಗಿದ್ದಾರೆ. ನಿತೀಶ್ ಕುಮಾರ್ ಬಿಜೆಪಿ ಜೊತೆ ಕೈ ಜೋಡಿಸಿದ ನಂತರ ಕಳೆದ ವರ್ಷ ಜುಲೈ ತಿಂಗಳಲ್ಲಿ ಬಿಜೆಪಿಯ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಆರ್ ಜೆಡಿ ಪ್ರತಿಪಕ್ಷ ಸ್ಥಾನದಲ್ಲಿದೆ.
ಬಿಹಾರ ಆರ್ ಜೆಡಿ ಅಧ್ಯಕ್ಷ ರಾಮಚಂದ್ರ ಪುರ್ವೆ ಕೂಡಾ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು, ರಾಬ್ಡಿದೇವಿಗೆ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕಿಯ ಸ್ಥಾನ ನೀಡುವಂತೆ ಸಭಾಪತಿಗಳಿಗೆ ಪ್ರಸ್ತಾವ ಕಳುಹಿಸಿದೆ.