ನವದೆಹಲಿ: ವಿರೋಧ ಪಕ್ಷಗಳು ಸಲ್ಲಿಸಿದ್ದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಮಹಾಭಿಯೋಗ ನಿಲುವಳಿ ಸೂಚನೆ ತಿರಸ್ಕಾರ ಆತುರದ ನಿರ್ಧಾರವಲ್ಲ ಎಂದು ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಸ್ಪಷ್ಟಪಡಿಸಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಕ್ತಪಡಿಸಲು ಅವಕಾಶವಿದೆ ಆದರೆ ಅಂತಿಮವಾಗಿ ಸತ್ಯವೇ ಗೆಲ್ಲುತ್ತದೆ. ನನ್ನ ನಿರೀಕ್ಷೆಗೆ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ನಾನು ನನ್ನ ಕೆಲಸವನ್ನು ಮಾಡಿದ್ದೇನೆ ಎಂದು ವೆಂಕಯ್ಯ ನಾಯ್ಡು ಅವರು ತಿಳಿಸಿದ್ದಾರೆ.
1968ರ ನ್ಯಾಯಾಧೀಶರ ತನಿಖಾ ಕಾಯ್ದೆ ಮತ್ತು ಸಂವಿಧಾನದ ನಿಬಂಧನೆಗಳ ಅಡಿಯಲ್ಲಿ ನಾನು ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನಾನು ನನ್ನ ಕೆಲಸವನ್ನು ಮಾಡಿದ್ದೇನೆ ಮತ್ತು ಅದರಲ್ಲಿ ನನಗೆ ತೃಪ್ತಿ ಇದೆ ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್ ನ 10 ಮಂದಿ ವಕೀಲರು ನಾಯ್ಡು ಅವರನ್ನು ಭೇಟಿ ಮಾಡಿ ಶುಭಾಶಯ ತಿಳಿಸುವ ಸಂದರ್ಭದಲ್ಲಿ ನಾಯ್ಡು ಅವರು, ಭಾರತದ ಮುಖ್ಯ ನ್ಯಾಯಾಧೀಶರು ದೇಶದ ಅತ್ಯುನ್ನತ ನ್ಯಾಯಾಂಗ ಕಾರ್ಯದರ್ಶಿಯಾಗಿದ್ದಾರೆ ಮತ್ತು ಅವರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಯಾವುದೇ ವಿಷಯವು ಪರಿಸ್ಥಿತಿಯನ್ನು ಮತ್ತಷ್ಟು ದುರ್ಬಲಗೊಳಿಸುವುದನ್ನು ತಡೆಗಟ್ಟಲು ಮುಂಚಿತವಾಗಿ ಸೂಚಿಸಲಾದ ಕಾರ್ಯವಿಧಾನಗಳಲ್ಲಿ ಪರಿಹರಿಸಬೇಕಾಗಿದೆ ಎಂದು ಹೇಳಿದ್ದಾರೆ.
ಗ್ಯಾಂಗ್ ಸ್ಟರ್ ಸೊಹ್ರಾಬುದ್ದೀನ್ ಶೇಖ್ ಅನುಮಾನಾಸ್ಪದ ಎನ್ ಕೌಂಟರ್ ಪ್ರಕರಣದ ನ್ಯಾಯಾಧೀಶ ಬಿ.ಹೆಚ್. ಲೋಯಾ ಸಾವಿನ ತನಿಖೆಗೆ ಆದೇಶಿಸಲು ದೀಪಕ್ ಮಿಶ್ರಾ ನಿರಾಕರಿಸಿದ ಹಿನ್ನಲೆಯಲ್ಲಿ ಮಹಾಭಿಯೋಗಕ್ಕೆ ಕಾಂಗ್ರೆಸ್ ಮುಂದಾಗಿತ್ತು. ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಪೀಠ ಆದೇಶ ನೀಡಿದ ಬೆನ್ನಲ್ಲೇ 7 ಪ್ರತಿಪಕ್ಷಗಳ ರಾಜ್ಯಸಭೆಯ 71 ಸದಸ್ಯರು ಸಹಿ ಹಾಕಿ ಮಹಾಭಿಯೋಗಕ್ಕೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ನೋಟಿಸ್ ನೀಡಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos