ಬೆಂಗಳೂರು: ಮಾಜಿ ಸಚಿವ ಗಣಿಧಣಿ ಜನಾರ್ಧನ ರೆಡ್ಡಿ ಬಿಜೆಪಿ ಪಕ್ಷದ ಅಧಿಕೃತ ಸ್ಟಾರ್ ಪ್ರಚಾರಕರಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಜ್ಯ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಅವರು, ಜನಾರ್ಧನ ರೆಡ್ಡಿ ಪಕ್ಷದ ಸ್ಟಾರ್ ಪ್ರಚಾರಕರಲ್ಲ. ಶ್ರೀರಾಮುಲು ಪರ ಅವರು ಪ್ರಚಾರ ಮಾಡುತ್ತಿರುವುದು ಅವರ ವೈಯುಕ್ತಿಕ ವಿಚಾರ. ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ಕಾಂಗ್ರೆಸ್ಸಿಗರು ಅನಗತ್ಯವಾಗಿ ವಿವಾದ ಮಾಡುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರ ಪರವಾಗಿ ಮೊಳಕಾಲ್ಮೂರಿನಲ್ಲಿ ಜನಾರ್ಧನ ರೆಡ್ಡಿ ಪ್ರಚಾರ ಕೈಗೊಂಡಿದ್ದು, ಇದಕ್ಕಾಗಿ ಅಲ್ಲಿಯೇ ಒಂದು ಬಾಡಿಗೆ ಮನೆ ಕೂಡ ಪಡೆದು ಅಲ್ಲಿಯೇ ನೆಲೆಸಿದ್ದಾರೆ. ಅಲ್ಲದೆ ಪ್ರಚಾರದ ಸಂದರ್ಭದಲ್ಲಿ ಜನಾರ್ಧನ ರೆಡ್ಡಿ ಸಿಎಂ ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರ ಮಾಡಿದ್ದು, ಸಿದ್ಧರಾವಣ ಸಂಹಾರಕ್ಕೆ ಶ್ರೀರಾಮ ಬಂದಿದ್ದಾನೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರನ್ನು ರಾವಣನಿಗೆ, ಶ್ರೀರಾಮುಲು ಅವರನ್ನು ರಾಮನಿಗೆ ಹೋಲಿಕೆ ಮಾಡಿದ್ದರು.
ಇದು ರಾಜಕೀಯ ವಲಯದಲ್ಲಿ ವ್ಯಾಪಕ ಪರ-ವಿರೋಧ ಟೀಕೆಗಳಿಗೆ ಗುರಿಯಾಗಿತ್ತು. ಗಣಿ ಹಗರಣ ಪ್ರಕರಣದಲ್ಲಿ ರೆಡ್ಡಿ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದು, ಮತ್ತೆ ಪಕ್ಷದ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಂಡಿಲ್ಲ, ಅಲ್ಲದೆ ನ್ಯಾಯಾಲಯ ಅವರನ್ನು ಬಳ್ಳಾರಿ ಪ್ರವೇಶ ಮಾಡದಂತೆಯೂ ನಿರ್ಬಂಧ ಹೇರಿದ್ದು, ಇದೇ ಕಾರಣಕ್ಕೆ ರೆಡ್ಡಿ ಬಳ್ಳಾರಿ ಹೊರವಲಯದಲ್ಲಿ ನಿವಾಸ ಮಾಡಿಕೊಂಡಿದ್ದಾರೆ. ಇದೀಗ ಶ್ರೀರಾಮುಲು ಪರ ಪ್ರಚಾರ ಕಾರ್ಯಕ್ಕೆ ಮುಂದಾಗುವ ಮೂಲಕ ರೆಡ್ಡಿ ರಾಜಕೀಯ ನಾಯಕ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಹಿಂದೆ ಇದೇ ವಿಚಾರದ ಕುರಿತು ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಹೇಳಿದ್ದರು.
ಇದಕ್ಕೆ ವ್ಯತಿರಿಕ್ತ ಎಂಬಂತೆ ಪ್ರತಿಕ್ರಿಯೆ ನೀಡಿದ್ದ ಶ್ರೀರಾಮುಲು, ಜನಾರ್ಧನ ರೆಡ್ಡಿ ಈಗಲೂ ಬಿಜೆಪಿಗೆ ಸೇರಿದವರಾಗಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಅವರು ಎಂದು ಹೇಳಿದ್ದರು.
ಇನ್ನು ನಿನ್ನೆಯಷ್ಟೇ ಇದೇ ವಿಚಾರವಾಗಿ ಟ್ವೀಟ್ ಮಾಡಿದ್ದ ಸಿಎಂ ಸಿದ್ದರಾಮಯ್ಯ, ಸುಮಾರು 36 ಸಾವಿರ ಕೋಟಿ ರೂ ಮೌಲ್ಯದ ರಾಜ್ಯದ ಗಣಿ ಸಂಪತ್ತನ್ನು ಲೂಟಿ ಮಾಡಿದ್ದ ಲೂಟಿಕೋರರಿಗೆ ಬಿಜೆಪಿ ಮತ್ತೆ ಮಣೆ ಹಾಕಿದೆ. ಗಣಿ ಸಂಪತ್ತು ನುಂಗಿ ಹಾಕಿದವರಿಗೆ ಟಿಕೆಟ್ ನೀಡಿದೆ ಎಂದು ಟ್ವೀಟ್ ಮಾಡಿದ್ದರು. ಇದೇ ವಿಚಾರವಾಗಿ ಇಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಟ್ವಿಟರ್ ನಲ್ಲಿ ರೆಡ್ಡಿ ಸಹೋದರರು ಮತ್ತು ಬಿಜೆಪಿ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿರುವ ರಾಹುಲ್ ಗಾಂಧಿ, ರೆಡ್ಡಿ ಸಹೋದರರು ಮತ್ತು ಬಿಎಸ್ ಯಡಿಯೂರಪ್ಪ ಗಣಿ ಸಂಪತ್ತನ್ನು ಲೂಟಿ ಮಾಡಿದರು. ನಮ್ಮ ಸರ್ಕಾರ ಅವರನ್ನು ಜೈಲಿಗಟ್ಟಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅವರನ್ನು ಜೈಲಿನಿಂದ ಹೊರಗೆ ತರುವ ಪ್ರಯತ್ನ ಮಾಡಿದೆ. ಅಲ್ಲದೆ ಅವರ ಪೈಕಿ 8 ಮಂದಿಗೆ ಟಿಕಟ್ ಕೂಡ ಕರ್ನಾಟಕ ವಿಧಾನಸಭೆಗೆ ಕಳುಹಿಸಲು ಪ್ರಯತ್ನಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ನಡೆ ಪ್ರಾಮಾಣಿಕ ಪ್ರಜೆಗೆ ಮಾಡುತ್ತಿರುವ ಅಪಮಾನವಾಗಿದ್ದು, ಬಸವಣ್ಣನವರ ತತ್ಪಾದರ್ಶಗಳಿಗೆ ತೋರುತ್ತಿರುವ ಅಗೌರವವಾಗಿದೆ ಎಂದು ಟ್ವೀಟ್ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics