ದೇಶ

ಒಳ್ಳೆಯ ದಿನಗಳು ಬರಲಿವೆ: ಜೋಧ್‏ಪುರ ಜೈಲಿನಿಂದ ಅಸಾರಾಂ ಬಾಪು ಹೇಳಿಕೆಯ ವಿಡಿಯೋ ವೈರಲ್

Sumana Upadhyaya

ಜೋಧ್ ಪುರ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೋಧ್ ಪುರ ಜೈಲಿನಲ್ಲಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ದೂರವಾಣಿ ಮೂಲಕ, ತಮ್ಮ ಈ ಶಿಕ್ಷೆ ಅಲ್ಪಕಾಲದವರೆಗೆ ಮಾತ್ರ ಇರಲಿದ್ದು ಒಳ್ಳೆಯ ದಿನಗಳು ಬರಲಿವೆ ಎಂದು ಹೇಳುವ ಆಡಿಯೊ ಕ್ಲಿಪ್ ಇದೀಗ ಆನ್ ಲೈನ್ ನಲ್ಲಿ ಸದ್ದುಮಾಡುತ್ತಿದೆ.

ವ್ಯಕ್ತಿಯೊಬ್ಬರ ಜತೆ ನಿನ್ನೆ ಅಸಾರಾಂ ಬಾಪು ಸುಮಾರು 15 ನಿಮಿಷಗಳವರೆಗೆ ಸಂಭಾಷಣೆ ನಡೆಸಿರುವ ಆಡಿಯೊ ಕ್ಲಿಪ್ ನ್ನು ಜೈಲು ಸಿಬ್ಬಂದಿ ರೆಕಾರ್ಡ್ ಮಾಡಿರಬಹುದು ಎಂದು ಜೋಧಪುರ್ ಕೇಂದ್ರ ಕಾರಾಗೃಹದ ಡಿಐಜಿ ವಿಕ್ರಮ್ ಸಿಂಗ್ ಹೇಳಿದ್ದಾರೆ.

ಜೈಲಿನ ಅಧಿಕಾರಿಗಳ ಅನುಮತಿ ಕೋರಿ ಅಸಾರಾಂ ಬಾಪು ವ್ಯಕ್ತಿಗೆ ಕರೆ ಮಾಡಿದ್ದಾರೆ. ಜೈಲಿನ ಕೈದಿಗಳಿಗೆ ತಿಂಗಳಲ್ಲಿ ಎರಡು ಸಂಖ್ಯೆಗಳಿಗೆ ಸುಮಾರು 80 ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಲಾಗುತ್ತದೆ. ಹೀಗೆ ಅಸಾರಾಂ ಬಾಪು ನಿನ್ನೆ ಅವಕಾಶ ನೀಡಲಾಗಿತ್ತು. ಈ ವೇಳೆ ಅವರು ನಿನ್ನೆ ಸಾಯಂಕಾಲ 6.30 ರ ಸುಮಾರಿಗೆ ಸಬರ್ಮತಿ ಆಶ್ರಮದ ಸನ್ಯಾಸಿಯೊಬ್ಬರಿಗೆ ಕರೆ ಮಾಡಿ ತಮಗೆ ವಿಧಿಸಿರುವ ಶಿಕ್ಷೆ ಅಲ್ಪಕಾಲವಾಗಿ ಶೀಘ್ರವೇ ಹೊರಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಆಡಿಯೊ ಕ್ಲಿಪ್ ನಿಂದ ತಿಳಿದುಬಂದಿದೆ. ಈ ಸಂಭಾಷಣೆಯನ್ನು ದಾಖಲು ಮಾಡಿ ಅದನ್ನು ಆನ್ ಲೈನ್ ನಲ್ಲಿ ವೈರಲ್ ಮಾಡಿರಬಹುದು ಎಂದು ಸಿಂಗ್ ಹೇಳಿದ್ದಾರೆ.

ದೂರವಾಣಿಯಲ್ಲಿ ಧರ್ಮೋಪದೇಶದಂತೆ ಏಕಮುಖ ಸಂವಹನದಂತೆ ಆಡಿಯೊ ಕ್ಲಿಪ್ ಇದ್ದು ಅಸಾರಾಂ ಬಾಪು ಆರಂಭದಲ್ಲಿ ತನ್ನ ಅನುಯಾಯಿಗಳಿಗೆ ನ್ಯಾಯಾಲಯದ ತೀರ್ಪಿನ ದಿನ ಶಾಂತಿ ಕಾಪಾಡಿದ್ದಕ್ಕೆ ಕೃತಜ್ಞತೆ ಹೇಳಿದ್ದಾರೆ.

ನಾವು ಈ ದೇಶದ ಕಾನೂನು, ವ್ಯವಸ್ಥೆ ಆದೇಶಗಳನ್ನು ಪಾಲಿಸಬೇಕು. ನಾನು ಕೂಡ ಅದನ್ನು ಅನುಸರಿಸುತ್ತೇನೆ ಎಂದು ಹೇಳುವ ಮಾತು ಆಡಿಯೊ ಕ್ಲಿಪ್ ನಲ್ಲಿ ದಾಖಲಾಗಿದೆ.

ಕೆಲವರು ತಮ್ಮ ಆಶ್ರಮಕ್ಕೆ ಅಪಪ್ರಚಾರವೆಸಗಿ ಆಶ್ರಮದ ನಿಯಂತ್ರಣ ತೆಗೆದುಕೊಳ್ಳಲು ನೋಡುತ್ತಿದ್ದಾರೆ. ಅಂತಹ ಪ್ರಚೋದನಾಕಾರಿ ವಿಷಯಗಳಿಗೆ ಮತ್ತು ಆಶ್ರಮದ ಬಗ್ಗೆ ಅಪಪ್ರಚಾರ ಮಾಡುವವರ ಟೀಕೆಗಳಿಗೆ ಕಿವಿಗೊಡುವುದು ಬೇಡ ಎಂದು ಅಸಾರಾಂ ಬಾಪು ಆಡಿಯೊದಲ್ಲಿ ತನ್ನ ಅನುಯಾಯಿಗಳಿಗೆ ಹೇಳಿದ್ದಾರೆ.

ಪ್ರಕರಣದ 20 ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಿರುವ ಮತ್ತಿಬ್ಬರು ಆರೋಪಿಗಳಾದ ಶಿಲ್ಪಿ ಮತ್ತು ಶರತ್ ಚಂಡಾ ಅವರನ್ನು ಮೊದಲು ಜೈಲಿನಿಂದ ಬಿಡುಗಡೆ ಮಾಡಿಸಬೇಕು. ಏಕೆಂದರೆ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುವುದು ತಂದೆಯ ಮೊದಲ ಕರ್ತವ್ಯದಂತೆ ಆಶ್ರಮದಲ್ಲಿ ಶಿಷ್ಯರ ಯೋಗಕ್ಷೇಮ ನನಗೆ ಮೊದಲ ಆದ್ಯತೆಯಾಗಿದೆ, ನಂತರ ನನ್ನ ಬಿಡುಗಡೆಗೆ ಯೋಚಿಸುತ್ತೇನೆ, ಇವೆಲ್ಲಕ್ಕೂ ವಕೀಲರ ವ್ಯವಸ್ಥೆ ಮಾಡಬೇಕಾಗಿದೆ ಎಂದು ಅಸರಂ ದೂರವಾಣಿಯಲ್ಲಿ ಮಾತನಾಡುವಾಗ ಹೇಳಿರುವುದು ದಾಖಲಾಗಿದೆ.

2013ರಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಾರಾಂ ಬಾಪು ದೋಷಿ ಎಂದು ಕಳೆದ ಬುಧವಾರ ಜೋಧ್ ಪುರ್ ನ್ಯಾಯಾಲಯ ತೀರ್ಪು ಪ್ರಕಟಿಸಿತ್ತು.

SCROLL FOR NEXT