ಸೂರಜ್‌ಕುಂಡ್ (ಹರಿಯಾಣ): ಬಾಲಿವುಡ್ ನಟಿ ಶ್ರೀದೇವಿ ಅವರ ನಿಗೂಢ ಸಾವಿನ ನೆನಪು ಮಾಸುವ ಮುನ್ನವೇ ಅದೇ ಘಟನೆ ಹೋಲುವ ಇನ್ನೊಂದು ದುರಂತ ಸಂಭವಿಸಿದೆ.
ಹರಿಯಾಣ ಸೂರಜ್‌ಕುಂಡ್‌ನ ಹೋಟೆಲ್ ತಾಜ್ ವಿವಾಂತಾದಲ್ಲಿ ಅನಿವಾಸಿ ಭಾರತೀಯ ಮಹಿಳೆಯ ದೇಹವೊಂದು ಸ್ನಾನದ ಟಬ್ನಲ್ಲಿ ಪತ್ತೆಯಾಗಿದೆ. ಅಮೆರಿಕದ ನ್ಯೂಜೆರ್ಸಿಯಲ್ಲಿ ಉದ್ಯಮಿಯಾಗಿರುವ ಅರುಣ್ ಅವರ ಪತ್ನಿ ಋತು ಕುಮಾರ್ ತಾವು ತಂಗಿದ್ದ ಐಷಾರಾಮಿ ಹೋಟೆಲ್ನ ಸ್ನಾನದ ಟಬ್ ನಲ್ಲಿ ಬಿದ್ದು ಶವವಾಗಿದ್ದಾರೆ,
ಗ್ರೇಟರ್ ಕೈಲಾಸ್‌ನ ನಿವಾಸಿಯಾದ ಅರುಣ್ ಅವರ ಪತ್ನಿ ತಾಜ್ ವಿವಾಂತಾದ ಕೊಠಡಿ ಸಂಖ್ಯೆ 631ರಲ್ಲಿ ತಂಗಿದ್ದರು. 22 ಏಪ್ರೀಲ್ ನಿಂದಲೂ ಆಕೆ ಇದೇ ಕೊಠಡಿಯಲ್ಲಿದ್ದರು. ಗುರುವಾರ ಮಧ್ಯಾಹ್ನದಿಂದ ಆಕೆ ಕುಟುಂಬದವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
ಇದರಿಂದಾಗಿ ಆತಂಕಗೊಂಡ ಋತು ಅವರ ಸೋದರಿ ಹೋಟೆಲ್‌ಗೆ ಧಾವಿಸಿದ್ದಾರೆ. ಅಲ್ಲಿ ಕೊಠಡಿಯನ್ನು ಪರಿಶೀಲಿಸಿದ ವೇಳೆ ಋತು ಬಾತ್‌ಟಬ್‌ನಲ್ಲಿ ಬಿದ್ದು ಮೃತಪಟ್ಟಿರುವುದು ತಿಳಿದು ಬಂದಿದೆ.
ಸಧ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು ವರದಿ ಕೈಸೇರಿದ ಬಳಿಕ ಸಾವಿನ ಕುರಿತ ನಿಖರ ಕಾರಣ ತಿಳಿಯಲಿದೆ. ಶೀಘ್ರವಾಗಿ ಪ್ರಕರಣವನ್ನು ಬೇಧಿಸುವವರಿದ್ದೇವೆ ಎಂದು ಸೂರಜ್‌ಕುಂಡ್ ಪೋಲೀಸರು ಹೇಳಿದ್ದಾರೆ.
ಏ.26ರ ಗುರುವಾರ ಹೋಟೆಲ್ ಸಿಬ್ಬಂದಿಗಳಿಗೆ ಕರೆ ಮಾಡಿದ್ದ ಋತು ’ನನಗೆ ಯಾರೂ ತೊಂದರೆ ಮಾಡಬೇಡಿ, ವೇಟರ್ಗಳನ್ನು ಕಳುಹಿಸಬೇಡಿ, ಕರೆಗಳನ್ನು ನಿರ್ಬಂಧಿಸಿ’ ಎ<ದು ಸೂಚಿಸಿದ್ದರು. ಕೊಠಡಿಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಅಲ್ಲದೆ ಯಾವ ಮಾದಕ ಪದಾರ್ಥ ಸೇವಿಸಿರುವ ಕುರುಹೂ ದೊರಕಿಲ್ಲ ಎಂದು ಪೋಲೀಸರು ಹೇಳಿದ್ದಾರೆ.
ಹೃದಯಾಘಾತದಿಂದ ಆಕೆ ಸಾವನ್ನಪ್ಪಿದ್ದಾರೆ ಎಂದು ಶಂಕಿಸಿರುವ ಪೋಲೀಸರು ಮರಣೋತ್ತರ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದಾರೆ.
ಮೃತ ಮಹಿಳೆಯ ಸೋದರಿ ಮಾತನಾಡಿ "ಋತು ಕಳೆದ ವರ್ಷ ಮಾರ್ಚ್ 3ರಂದು ಅರುಣ್ಕುಮಾರ್ ಅವರನ್ನು ವಿವಾಹವಾಗಿದ್ದರು. ಅರುಣ್ ಅವರಿಗಿದು ಮೂರನೇ ವಿವಾಹವಾಗಿದ್ದರೆ ಋತುವಿಗೆ ಎರಡನೇ ವಿವಾಹವಾಗಿತ್ತು. ವಿವಾಹವಾದಂದಿನೊಂದ ಆಕೆ ಭಾರತದಲ್ಲೇ ನೆಲೆಸಿದ್ದಳು. ಹೋಟೆಲ್ ಅಥವಾ ಸೋದರ/ಸೋದರಿಯರ ಮನೆಗಳಲ್ಲಿ ಅವಳು ವಾಸ್ತವ್ಯ ಹೂಡಿದ್ದಳು" ಎಂದಿದ್ದಾರೆ.