ವಿಜಯವಾಡ: ವೈಎಸ್ ಆರ್ ಸಿ ಮತ್ತು ಬಿಜೆಪಿ ವಿರುದ್ದ ವಾಗ್ದಾಳಿ ಮುಂದುವರಿಸಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಈ ಎರಡು ಪಕ್ಷಗಳು ಒಟ್ಟಾಗಿ ಚುನಾವಣೆಗಿಳಿದರೇ ಯಾವುದೇ ಆಶ್ಚರ್ಯವಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯ್ಡು, ಕೇಂದ್ರದ ಬಿಜೆಪಿ ನಾಯಕರುಗಳು ಅರ್ಥಹೀನ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿ ಕಾರಿದರು. ಹಲವು ವಿಷಯಗಳ ಬಗ್ಗೆ ಮಾತನಾಡಿದ ನಾಯ್ಡು, ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಮಹತ್ತರವಾದ ಬದಲಾವಣೆಗಳಾಗಿಲ್ಲ, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಚಾರಕ್ಕೆ ಬರುವುದನ್ನು ನಿರಾಕರಿಸಿದರು.
ನಮ್ಮ ಹೋರಾಟ ನಮ್ಮ ರಾಜ್ಯಕ್ಕಾಗಿ ಯಾವುದೇ ಬೇರೆ ರಾಜ್ಯಕ್ಕೆ ತೆರಳಿ ಪ್ರಚಾರ ಮಾಡುವ ಪ್ರಶ್ನೆಯೇ ಇಲ್ಲ, ನಮಗೆ ದ್ರೋಹ ಮಾಡಿದವರಿಗೆ ತಕ್ಕ ಪಾಠ ಕಲಿಸುತ್ತೇವೆ, ಜನರು ಬುದ್ದಿವಂತರು, ಆವರೇ ನಿರ್ಧರಿಸುತ್ತಾರೆ. ಕಾಂಗ್ರೆಸ್ ಮತ್ತು ಬಿಜೆಪಿಗಳ ಅನ್ಯಾಯ ಮಿತಿಮೀರಿದೆ ಎಂದು ವಾಗ್ದಾಳಿ ನಡೆಸಿದ್ದಾರೆ,
ಬಾಹ್ಯ ಬೆಂಬಲದೊಂದಿಗೆ ನಾವು ಮೂರನೇ ರಂಗ ರಚಿಸುತ್ತೇವೆ, ಒಂದು ವೇಳೆ ನಮ್ಮ 25 ಸಂಸದರು ಗೆಲುವು ಸಾಧಿಸಿದರೇ ಪ್ರಧಾನಮಂತ್ರಿ ಯಾರಾಗಬೇಕು ಎಂಬುದನ್ನು ನಾವು ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.