ದೇಶ

ಜೈಲುಗಳ ಸಂದರ್ಶಕರ ಮಂಡಳಿ ನೇಮಕ ಮಾಡದ ರಾಜ್ಯಗಳ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ

Nagaraja AB

ನವದೆಹಲಿ: ಪ್ರತಿನಿತ್ಯ ಕಾರಾಗೃಹಗಳನ್ನು ಪರಿಶೀಲಿಸುವ  ಸಂದರ್ಶಕರ  ಮಂಡಳಿಯನ್ನು  ಹಲವು  ರಾಜ್ಯಗಳಲ್ಲಿ  ಇನ್ನೂ  ನೇಮಕ ಮಾಡದಿರುವುದಕ್ಕೆ  ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ  ವ್ಯಕ್ತಪಡಿಸಿದೆ.

 ಗೃಹ ಸಚಿವಾಲಯ  ಸಿದ್ಧಪಡಿಸಿರುವ  ಕಾರಾಗೃಹ  ನೀತಿ ಸಂಹಿತೆಯನ್ನು  ರಾಜ್ಯಗಳು ಏಕೆ ಪಾಲಿಸುತ್ತಿಲ್ಲ ಎಂದು ನ್ಯಾಯಮೂರ್ತಿಗಳಾದ  ಮದನ್ ಬಿ. ಲೊಕುರ್  ಮತ್ತು ದೀಪಕ್  ಗುಪ್ತ ಅವರನ್ನೊಳಗೊಂಡ ಪೀಠ , ಪ್ರಶ್ನಿಸಿದ್ದು, ಸಂದರ್ಶಕರ ಮಂಡಳಿ ನೇಮಕ ಅತ್ಯಗತ್ಯ ಎಂದು   ಅಭಿಪ್ರಾಯಪಟ್ಟಿದೆ.

 ದೆಹಲಿಯ  ತಿಹಾರ್ ಜೈಲು ಸೇರಿದಂತೆ ಹಲವು ರಾಜ್ಯಗಳಲ್ಲಿ  ಸಂದರ್ಶಕರ ಮಂಡಳಿ  ನೇಮಕ ಮಾಡಿಲ್ಲ ಎಂದು ವಕೀಲ  ಗೌರವ್ ಆಗರ್ ವಾಲ್   ಈ ಪೀಠದ ಮುಂದೆ ಮಾಹಿತಿ ನೀಡಿದ್ದರು.

 ಗೃಹ ಸಚಿವಾಲಯ ಸಿದ್ಧಪಡಿಸಿರುವ ಸ್ವೀಕಾರ್ಹ ದಾಖಲೆಗಳನ್ನು  ಗೃಹ ಇಲಾಖೆ ಏಕೆ ಪಾಲಿಸುತ್ತಿಲ್ಲ ಎಂಬುದನ್ನು ಗಮನಿಸಿಲ್ಲ ಎಂದು ನ್ಯಾಯಾಲಯ ಹೇಳಿದ್ದು,  ಸಂದರ್ಶಕರ  ಮಂಡಳಿ ನೇಮಿಸುವಂತೆ ರಾಜ್ಯಗಳಿಗೆ   ಸಲಹೆ ನೀಡುವಂತೆ  ಗೃಹ ಸಚಿವಾಲಯಕ್ಕೆ ತಿಳಿಸಿದೆ.

ದೇಶದಲ್ಲಿನ 1382 ಕಾರಾಗೃಹಗಳು ಅಮಾನವೀಯ ಸ್ಥಿತಿಯಲ್ಲಿವೆ  ಎಂಬ ವಿಚಾರ   ಕುರಿತಂತೆ  ಸುಪ್ರೀಂಕೋರ್ಟಿನಲ್ಲಿ  ವಿಚಾರಣೆ ನಡೆಸುತ್ತಿದ್ದು, ಆಗಸ್ಟ್  8 ರಂದು ವಿಚಾರಣೆ ನಡೆಯಲಿದ್ದು, ಈ ಸಂದರ್ಭದಲ್ಲಿ  ತೆರೆದೆ  ಜೈಲುಗಳ ಬಗ್ಗೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ನ್ಯಾಯಾಲಯವು ದೇಶದಾದ್ಯಂತ ಮಿತಿಮೀರಿದ ಜೈಲಿಗಳಿಗೆ ತೀವ್ರವಾದ ವಿನಾಯಿತಿ ನೀಡಿದೆ. ಖೈದಿಗಳು ಕೂಡಾ ಮಾನವ ಹಕ್ಕುಗಳನ್ನು ಹೊಂದಿದ್ದು,  ಅವರನ್ನು ಪ್ರಾಣಿಗಳ ರೀತಿಯಲ್ಲಿ ಜೈಲಿನಲ್ಲಿ ಕೂಡಿಹಾಕಬಾರದು ಎಂದು ಸುಪ್ರೀಂಕೋರ್ಟ್   ಹೇಳಿಕೆ ನೀಡಿದೆ.

 ಜೈಲುಗಳಲ್ಲಿನ ಅಸ್ವಾಭಾವಿಕ ಸಾವು ಹಾಗೂ ಸುಧಾರಣೆ ಕುರಿತಂತೆ ಹಲವು ನಿರ್ದೇಶನಗಳನ್ನು  ಸುಪ್ರೀಂಕೋರ್ಟ್  ಈ ಹಿಂದೆಯೇ ಹೊರಡಿಸಿತ್ತು.

SCROLL FOR NEXT