ಕೆಎಂ ಜೋಸೆಫ್ ಪದೋನ್ನತಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಭೇಟಿ ಮಾಡಿದ ನ್ಯಾಯಾಧೀಶರು
ನವದೆಹಲಿ: ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರಾಗಿ ಆ.06 ರಂದು ಇಬ್ಬರು ನ್ಯಾಯಾಧೀಶರು ಪದೋನ್ನತಿ ಪಡೆಯುತ್ತಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರ ನ್ಯಾ.ಕೆಎಂ ಜೋಸೆಫ್ ಅವರ ಸೇವಾ ಹಿರಿತನವನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರುಗಳು ಭೇಟಿ ಮಾಡಿದ್ದಾರೆ.
ಕೊಲಿಜಿಯಂ ನ ಸದಸ್ಯರೂ ಆಗಿರುವ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರಾದ ನ್ಯಾ.ಎಂಬಿ ಲೋಕುರ್, ಕುರಿಯನ್ ಜೋಸೆಫ್ ಅವರು ನ್ಯಾ. ದೀಪಕ್ ಮಿಶ್ರಾ ಅವರನ್ನು ಭೇಟಿ ಮಾಡಿದ್ದು, ನ್ಯಾ.ಜೋಸೆಫ್ ಅವರ ವಿಷಯವನ್ನು ಪ್ರಸ್ತಾಪಿಸಿದ್ದು, ನ್ಯಾ.ದೀಪಕ್ ಮಿಶ್ರಾ ಈ ವಿಷಯವನ್ನು ನ್ಯಾ.ಗೊಗೋಯ್ ಅವರ ಬಳಿ ಚರ್ಚಿಸಿ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಭ್ರವಸೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಅಧಿಸೂಚನೆಯಲ್ಲಿ ಪದೋನ್ನತಿ ಪಡೆಯಲಿರುವ ಕೆಎಂ ಜೋಸೆಫ್ ಅವರ ಹೆಸರನ್ನು ಮೂರನೇ ಸ್ಥಾನದಲ್ಲಿರಿಸಿತ್ತು. ಆದರೆ ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ಆಕ್ಷೇಪಿಸಿರುವ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ನ್ಯಾ.ಕೆಎಂ ಜೋಸೆಫ್ ಅವರ ಸೇವಾ ಹಿರಿತನವನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.