ದೇಶ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಕೆ.ಎಂ. ಜೋಸೆಫ್ ಸೇರಿ ಮೂವರು ಅಧಿಕಾರ ಸ್ವೀಕಾರ

Manjula VN
ನವದೆಹಲಿ: ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್, ಇಂದಿರಾ ಬ್ಯಾನರ್ಜಿ ಮತ್ತು ವಿನೀತ್ ಶರಣ್ ಅವರು ಸುಪ್ರೀಂಕೋರ್ಟ್ ನ್ಯಾಯಾಮೂರ್ತಿಗಳಾಗಿ ಮಂಗಳವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ. 
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ನಡೆದ ಸಮಾರಂಭದಲ್ಲಿ ಮೂವರು ನ್ಯಾಯಮೂರ್ತಿಗಳು ಅಧಿಕಾರ ಸ್ವೀಕಾರ ಮಾಡಿದ್ದಾರೆ. 
ಮೊದಲಿಗೆ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿಯವರು ಪ್ರಮಾಣ ಸ್ವೀಕರಿಸಿದರು. ನಂತರ ಶರಣ್ ಮತ್ತು ಜೋಸೆಫ್ ಅವರು ಪ್ರಮಾಣ ಸ್ವೀಕರಿಸಿದರು. 
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು, ಎಲ್ಲಾ ನ್ಯಾಯಾಧೀಶರು, ಕಾನೂನು ಅಧಿಕಾರಿಗಳು ಹಾಗೂ ವಕೀಲರ ಸಮ್ಮುಖದಲ್ಲಿ ಪ್ರತಿಜ್ಞಾವಿಧಿ ಬೋಧಿಸಿದರು. 
ಮೂವರು ನ್ಯಾಯಾಧೀಶರು ಅಧಿಕಾರ ಸ್ವೀಕಾರ ಮಾಡಿದ ಹಿನ್ನಲೆಯಲ್ಲಿ ಇದೀಗ ಸುಪ್ರೀಂಕೋರ್ಟ್ ನ್ಯಾಯಾಧೀಶರ ಸಂಖ್ಯೆ 25ಕ್ಕೆ ಹೆಚ್ಚಿದೆ. 
ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿಯವರು 2002ರ ಫೆಬ್ರವರಿಯಲ್ಲಿ ಕೋಲ್ಕತಾ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2016ರ ಆಗಸ್ಟ್ 8 ರಂದು ದೆಹಲಿ ಹೈಕೋರ್ಟ್'ಗೆ ವರ್ಗಾವಣೆಗೊಂಡ ಅವರು, 2017ರ ಏಪ್ರಿಲ್ 5 ರಂದು ಮದ್ರಾಸ್ ಹೈಕೋರ್ಟ್'ನ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದುಕೊಂಡಿದ್ದರು. 
ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರು 2004ರ ಅಕ್ಟೋಬರ್ 14 ರಂದು ಕೇರಳ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2014ರ ಜುಲೈ 18 ರಂದು ಉತ್ತರಾಖಂಡ ಹೈಕೋರ್ಟ್'ನ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು.
ನ್ಯಾಯಮೂರ್ತಿ ವಿನೀತ್ ಶರಣ್ ಅವರು, 2002ರ ಫೆಬ್ರವರಿ 14ರಂದು ಅಲಹಾಬಾದ್ ಹೈಕೋರ್ಟ್ ನಲ್ಲಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2015ರ ಫೆಬ್ರವರಿ 16ರಂದು ಕರ್ನಾಟಕ ಹೈಕೋರ್ಟ್'ಗೆ ವರ್ಗಾವಣೆಯಾಗಿದ್ದರು. 2016ರ ಫೆಬ್ರವರಿ 26ರಂದು ಒಡಿಶಾ ಹೈಕೋರ್ಟ್'ನ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದುಕೊಂಡಿದ್ದರು. 
SCROLL FOR NEXT