ದೇಶ

ಇಶ್ರತ್ ಪ್ರಕರಣ: ಮಾಜಿ ಪೋಲೀಸ್ ಅಧಿಕಾರಿ ವಂಜಾರ, ಅಮೀನ್ ಖುಲಾಸೆ ಅರ್ಜಿ ತಿರಸ್ಕೃತ

Raghavendra Adiga
ಅಹಮದಾಬಾದ್: ಇಶ್ರತ್ ಜಹಾನ್ ಮತ್ತು ಇತರ ಮೂರು ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಭಾಗಿಯಾಗಿದ್ದ ಮಾಜಿ ಪೊಲೀಸ್ ಅಧಿಕಾರಿಗಳಾದ ಡಿ.ಜಿ. ವಂಜಾರಾ ಮತ್ತು ಎನ್.ಕೆ. ಅಮೀನ್ ಅವರುಗಳ ಖುಲಾಸೆ ಅರ್ಜಿಗಳನ್ನು ಗುಜರಾತಿನ ಅಹಮದಾಬಾದ್ ಸಿಬಿಐ ವಿಶೇಷ ನ್ಯಾಯಾಲಯವು ತಿರಸ್ಕರಿಸಿದೆ. 
ನಕಲಿ ಎನ್ ಕೌಂಟರ್ ಪ್ರಕರಣದಿಂದ ನಮ್ಮನ್ನು ಆರೋಪ ಮುಕ್ತಗೊಳಿಸುವಂತೆ ಮಾಜಿ ಪೋಲೀಸ್ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ  ಜೆ. ಕೆ. ಪಾಂಡ್ಯ ತಿರಸ್ಕರಿಸಿದ್ದಾರೆ.
ಕಳೆದ ತಿಂಗಳು ಇಶ್ರತ್ ಜಹಾನ್ ತಾಯಿ ಶಮಿಮಾ ಕೌಸರ್ ಅವರ ವಾದಗಳ ಆಲಿಸಿದ್ದ ನ್ಯಾಯಾಲಯ ಆ ಸಂಬಂಧ ವಿಚಾರಣೆ ಅಂತ್ಯಗೊಳಿಸಿತ್ತು. ಕೌಸರ್ ವಂಜಾರಾ ಮತ್ತು ಅಮೀನ್ ಅರ್ಜಿಗಳ ಸಂಬಂಧ ನ್ಯಾಯಾಲಯವನ್ನು ಪ್ರಶ್ನಿಸಿದ್ದರು.
ಸಿಬಿಐ ಸಲ್ಲಿಸಿದ್ದ ಆರೋಪ ಪಟ್ಟಿ ಸುಳ್ಳುಗಳಿಂದ ಕೂಡಿದೆ, ಸಾಕ್ಷಿಗಳ ಏಳಿಕೆಗಳು ಸಹ ಸಂಶಯಾಸ್ಪದವಾಗಿದೆ ಎಂದು ವಂಜಾರಾ ಮತ್ತು ಅಮೀನ್ ತಮ್ಮ ಅರ್ಜಿಗಳಲ್ಲಿ ಹೇಳಿದ್ದರು. ಇದಕ್ಕೆ ವಿರುದ್ಧವಾಗಿ ಇಶ್ರತ್ ತಾಯಿ ಸಹ ಉನ್ನತ ಪೋಲೀಸ್ ಅಧಿಕಾರಿಗಳು ಹಾಗೂ ಆಡಳಿತದ ಉನ್ನತ ಸ್ಥಾನದಲ್ಲಿರುವವರು ನನ್ನ ಮಗಳನ್ನು ಪಿತೂರಿ ನಡೆಸಿ ಕೊಂದಿದ್ದಾರೆ ಎಂದು ನ್ಯಾಯಾಲಯಕ್ಕೆ ಅರಿಕೆ ಮಾಡಿದ್ದರು.
ಮುಂಬಯಿ ಮೂಲದ 19 ರ ಹರೆಯದ ಇಶ್ರತ್ ಜಹಾನ್ ಮತ್ತು ಇತರೆ ಮೂವರನ್ನು ಪೊಲೀಸರು ಜೂನ್ 15, 2004 ರಂದು.ಎನ್ ಕೌಂಟರ್ ನಡೆಸಿ ಹತ್ಯೆ ಮಾಡಿದ್ದರು.ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಈ ನಾಲ್ವರೂ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದರು ಅದಕ್ಕಾಗಿ ಕೊಲ್ಲಲಾಗಿದೆ ಎಂದು ಹೇಳಿಕೆ ನಿಡಿದ್ದರು.
SCROLL FOR NEXT