ಕೊಚ್ಚಿನ್: ಮೀನುಗಾರಿಕಾ ದೋಣಿಗೆ ಅಪರಿಚಿತ ಹಡಗೊಂದು ಡಿಕ್ಕಿಯಾದ ಪರಿಣಾಮ ಮೂವರು ಮೀನುಗಾರರು ಕೊಲ್ಲಲ್ಪಟ್ಟು ಒಂಬತ್ತು ಮಂದಿ ನಾಪತ್ತೆಯಾಗಿರುವ ಘಟನೆ ಕೇರಳದ ಕೊಚ್ಚಿ ನಲ್ಲಿ ನಡೆದಿದೆ.
ಮಂಗಳವಾರ ಬೆಳಗಿನ ಜಾವ 3.30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಮೀನುಗಾರಿಕೆ ದೋಣಿಯಲ್ಲಿ ಒತ್ಟು 14 ಮಂದಿ ಇದ್ದರೆನ್ನಲಾಗಿದೆ.ಎರ್ನಾಕುಲಂ ಜಿಲ್ಲೆಯ ಮುನಂಬಾಮ್ ಪ್ರದೇಶದವರಾಗಿದ್ದ ಇವರು ಚೆತ್ತುವಾ ಕರಾವಳಿಯ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು.
ಮೀನುಗಾರಿಕಾ ಉಪನಿರ್ದೇಶಕ ಎಸ್. ಮಹೇಶ್ ಹೇಳುವಂತೆ ದೋಣಿಯು ಅವಘಡದ ಕಾರಣ ಸಂಪೂರ್ಣ ಹಾನಿಗೊಂಡಿದೆ.ಅಲ್ಲದೆ ಮೀನುಗಾರರ ಪೈಕಿ 11 ಮಂದಿ ತಮಿಳುನಾಡು ಮೂಲದವರಾದರೆ ಇಬ್ಬರು ಪಶ್ಚಿಮ ಬಂಗಾಳ ಮೂಲದವರಾಗಿದ್ದು ಓರ್ವ ಕೇರಳದವನಿದ್ದಾರೆ. ಅಪಘಾತದ ಬಳಿಕ ನಾಪತ್ತೆಯಾಗಿರುವ ಅಪರಿಚಿತ ಹಡಗಿನ ಪತ್ತೆಗಾಗಿ ಕೋಸ್ಟ್ ಗಾರ್ಡ್ (ಕರಾವಳಿ ರಕ್ಷಣಾ ಪಡೆ) ಹುಡುಕಾಟ ಪ್ರಾರಂಭಿಸಿದೆ.
ಕೇರಳ ಮೀನುಗಾರಿಕಾ ಸಚಿವ ಜೆ ಮರ್ಸಿಕುಟ್ಟಿ ಅಮ್ಮ ಮಾದ್ಯಮಕ್ಕೆ ನೀಡಿದ್ದ ಹೇಳಿಕೆಯಲ್ಲಿ ಮೂವರು ಮೀನುಗಾರರು ಸಾವನ್ನಪ್ಪಿದ್ದಾಗಿ ಹೇಳಿದ್ದಾರೆ. ಪೋಲೀಸ್ ಹಾಗೂ ರಕ್ಷಣಾ ಪಡೆ ಕಾರ್ಯಾಚರಣೆ ಬಳಿಕವೇ ಸ್ಪಷ್ಟ ಮಾಹಿತಿ ದೊರಕಬೇಕಿದೆ.
ಇದಕ್ಕೂ ಹಿಂದೆ ಕಳೆದ ಜೂನ್ 7ರಂದು ವಿದೇಶೀ ನಾವೆಯು ಮೀನುಗಾರಿಕಾ ದೋಣೆಗೆ ಡಿಕ್ಕಿಯಾದ ಪರಿಣಾಮ ಇಬ್ಬರು ಮೀನುಗಾರರು ಗಾಯಗೊಂಡಿದ್ದರು.