ನವದೆಹಲಿ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಮುತ್ತುವೇಲ್ ಕರುಣಾನಿಧಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪವನ್ನು ಬುಧವಾರ ಮುಂದೂಡಲಾಗಿದೆ.
ಯಾವತ್ತೂ ಸಂಸದರಾಗಿರದ ವ್ಯಕ್ತಿಯೊಬ್ಬರಿಗೆ ಸಂತಾಪ ಸೂಚಿಸಿ ಕಲಾಪವನ್ನು ಮುಂದೂಡಿರುವುದು ಲೋಕಸಭೆ ಇತಿಹಾಸದಲ್ಲಿ ಇದೇ ಮೊದಲು ಎಂದು ವರದಿಯಾಗಿದೆ.
ಐದು ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿರುವ ಕರುಣಾನಿಧಿ ಅವರು 13 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಅವರು ಯಾವತ್ತೂ ಸಂಸದರಾಗಿ ಆಯ್ಕೆಯಾಗಿರಲಿಲ್ಲ. ಅಲ್ಲದೆ 50 ವರ್ಷಗಳ ಕಾಲ ಪ್ರಾದೇಶಿಕ ಪಕ್ಷ ಡಿಎಂಕೆ ಚುಕ್ಕಾಣಿಯನ್ನು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಸಂಸದರಾಗದೇ ಇದ್ದ ಮಾಜಿ ಸಿಎಂಗೆ ಗೌರವ ಸಲ್ಲಿಸಿ ಸಂಸತ್ ಕಲಾಪ ಮುಂದೂಡಲಾಗಿದೆ.
ಇಂದು ಬೆಳಗ್ಗೆ ಸಂಸತ್ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಕರುಣಾನಿಧಿ ಅವರು ಒಬ್ಬ ದಾರ್ಶನಿಕ ಮತ್ತು ಜನಸಾಮಾನ್ಯರ ನಾಯಕ ಎಂದು ಬಣ್ಣಿಸುವ ಮೂಲಕ ಗೌರವ ಸಲ್ಲಿಸಿದರು.
ಮೌನಾಚರಣೆ ಆಚರಿಸಿದ ಬಳಿಕ ಸ್ಪೀಕರ್ ಕಲಾಪವನ್ನು ನಾಳೆಗೆ ಮುಂದೂಡಿದರು.
ಇನ್ನು ರಾಜ್ಯಸಭೆಯಲ್ಲೂ ಸಹ ಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು, ಕರುಣಾನಿಧಿ ಅವರದ್ದು ಬಹುಮುಖಿ ವ್ಯಕ್ತಿತ್ವ ಮತ್ತು ಸಂಕಷ್ಟಗಳನ್ನು ಮೀರಿ ಬೆಳೆದ ವ್ಯಕ್ತಿಯಾಗಿದ್ದರು ಎಂದು ವರ್ಣಿಸಿದರು.