ನವದೆಹಲಿ: ಜೂನ್ ತಿಂಗಳಲ್ಲಿ ಲೆಫ್ಟಿನೆಂಟ್ ಗೌರ್ನರ್ ಕಚೇರಿಯನ್ನು ಒತ್ತಾಯ ಪೂರ್ವಕವಾಗಿ ಆಕ್ರಮಿಸಿಕೊಂಡಿದ್ದಕ್ಕಾಗಿ ದೆಹಲಿ ಸಿಎಂ ಕೇಜ್ರಿವಾಲ್ ಹಾಗೂ ಸಚಿವರ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ವಿಪಕ್ಷ ನಾಯಕ ವಿಜಯೇಂದರ್ ಗುಪ್ತಾ ಒತ್ತಾಯಿಸಿದ್ದಾರೆ.
ತಮ್ಮ ಬೇಡಿಕೆಗಳ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿ ದೆಹಲಿ ಸಿಎಂ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಸತ್ಯೇಂದ್ರ ಜೈನ್, ಗೋಪಾಲ್ ರೈ ಸೇರಿದಂತೆ ಹಲವು ಸಚಿವರು ಲೆಫ್ಟಿನೆಂಟ್ ಗೌರ್ನರ್ ನಿವಾಸ-ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಇದನ್ನು ಕ್ರಿಮಿನಲ್ ಸಂಚು ಹಾಗೂ ಲೆಫ್ಟಿನೆಂಟ್ ಗೌರ್ನರ್ ನ ಕಚೇರಿಯ ಅಕ್ರಮ ಪ್ರವೇಶ ಎಂದು ಹೇಳಿರುವ ಬಿಜೆಪಿ ನಾಯಕ ವಿಜಯೇಂದರ್ ಗುಪ್ತಾ, ದೆಹಲಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಕೇಜ್ರಿವಾಲ್ ಹಾಗೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಚಿವರ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.
ಕೇಜ್ರಿವಾಲ್ ಹಾಗೂ ಸಂಪುಟ ಸಚಿವರು ದೆಹಲಿಯಲ್ಲಿ ಅತ್ಯಂತ ತುರ್ತು ಅಗತ್ಯತೆಗಳಿದ್ದಾಗಲೂ ಹೇಗೆ ತಮ್ಮ ಕರ್ತವ್ಯ ಪೂರ್ಣಗೊಳಿಸದೇ ಇದ್ದರು ಎಂಬುದರ ಬಗ್ಗೆ ತನಿಖೆ ನಡೆಯಬೇಕೆಂದು ಗುಪ್ತ ಹೇಳಿದ್ದಾರೆ. ಕೇಜ್ರಿವಾಲ್ ಹಾಗೂ ಅವರ ಸಂಪುಟ ಸದಸ್ಯರು ನಡೆಸಿದ ಪ್ರತಿಭಟನೆ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಾಂವಿಧಾನಿಕ ಸಂಸ್ಥೆಯ ಮೇಲೆ ನಡೆಸಿದ ದಾಳಿಯಾಗಿದೆ ಎಂದು ಬಿಜೆಪಿ ನಾಯಕ ವಿಜಯೇಂದರ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.