ದೇಶ

ನಾನು ರಾಫೆಲ್ ಗಿಂತ ಉತ್ತಮ ಯುದ್ಧ ವಿಮಾನ ನಿರ್ಮಿಸುತ್ತೇನೆ, ಕಾಂಟ್ರಾಕ್ಟ್ ನನಗೆ ಕೊಡಿ: ಕಾಂಗ್ರೆಸ್ ಸಂಸದ

Lingaraj Badiger
ನವದೆಹಲಿ: ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ದೇಶದ ಅತಿ ದೊಡ್ಡ ಹಗರಣವಾಗಿದ್ದು, ಅದನ್ನು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಸಂಸದರು ಸದನದ ಒಳಗೆ ಮತ್ತು ಹೊರಗೆ ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು ಲೋಕಸಭೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಸಂಸದ ಸುನಿಲ್ ಜಾಖರ್ ಅವರು, ನಾನು ರಾಫೆಲ್ ಗಿಂತ ಉತ್ತಮ ಯುದ್ಧ ವಿಮಾನ ನಿರ್ಮಾಣ ಮಾಡುತ್ತೇನೆ. ಆ ಡೀಲ್ ಅನ್ನು ನನಗೆ ನೀಡಿ ಎಂದು ಮನವಿ ಮಾಡಿದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸುನಿಲ್ ಜಾಖರ್ ಅವರು, ಯುದ್ಧ ವಿಮಾನದ ಕಾಗದದ ಪ್ರತಿಕೃತಿಯನ್ನು ಪ್ರದರ್ಶಿಸುತ್ತ, ನಾನು ಉದ್ಯಮಿಗಳಿಗಿಂತ ಉತ್ತಮ ಯುದ್ಧ ವಿಮಾನ ತಯಾರಿಸುತ್ತೇನೆ. ನನಗೆ ಆ ಒಪ್ಪಂದ ನೀಡಿ ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಮನವಿ ಮಾಡಿದರು.
ಬಳಿಕ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ರಾಫೆಲ್ ಹಗರಣವನ್ನು ಜಂಟಿ ಸಂಸದೀಯ ಸಮಿತಿ ತನಿಖೆಗೆ ಒಪ್ಪಿಸಿಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು, ರಾಫೆಲ್ ಒಪ್ಪಂದದಲ್ಲಿ 45 ಸಾವಿರ ಕೋಟಿ ರುಪಾಯಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು.
ಇನ್ನು ಹಗರಣವನ್ನು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಯುಪಿಎ ಅಧ್ಯಕ್ಷ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಂಸತ್ ನ ಹೊರಗೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.
SCROLL FOR NEXT