ದೇಶ

ಚೀನಾದಲ್ಲಿ ಭಾರತದ ಕರೆನ್ಸಿ ನೋಟುಗಳ ಮುದ್ರಣ: ವರದಿ; ಸರ್ಕಾರವನ್ನು ಪ್ರಶ್ನಿಸಿದ ಕಾಂಗ್ರೆಸ್

Lingaraj Badiger
ನವದೆಹಲಿ: ಚೀನಾ ಬ್ಯಾಂಕ್‌ ನೋಟ್‌ ಪ್ರಿಂಟಿಂಗ್‌ ಆ್ಯಂಡ್‌ ಮಿಂಟಿಂಗ್‌ ಕಾರ್ಪೊರೇಶನ್‌ ಭಾರತ ಸೇರಿದಂತೆ ಇತರೆ ದೇಶಗಳ ವಿದೇಶಿ ಕರೆನ್ಸಿಗಳನ್ನು ಮುದ್ರಿಸುವ ಲೈಸನ್ಸ್ ಪಡೆದಿದೆ ಎಂದು ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ವರದಿ ಮಾಡಿದ್ದು, ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಇತ್ತೀಚಿಗೆ ಚೀನಾದ ನೋಟು ಮುದ್ರಣಾಲಯಗಳಲ್ಲಿ ನೋಟು ಮುದ್ರಣ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌  ವರದಿ ಮಾಡಿದೆ.
ಚೀನಾ ಬ್ಯಾಂಕ್‌ ನೋಟ್‌ ಪ್ರಿಂಟಿಂಗ್‌ ಆ್ಯಂಡ್‌ ಮಿಂಟಿಂಗ್‌ ಕಾರ್ಪೊರೇಶನ್‌ ನ ಮೂಲಗಳನ್ನು ಉಲ್ಲೇಖೀಸಿರುವ ಈ ವರದಿಯು, ಚೀನದ ಈ ನೋಟು ಮುದ್ರಣಾಲಯಗಳು ತಮ್ಮ ಪೂರ್ಣ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತಿವೆ ಮತ್ತು ಸರ್ಕಾರ ಈ ವರ್ಷ ಈ ಮುದ್ರಣ ಘಟಕಗಳಿಗೆ ಅಸಾಮಾನ್ಯ ಎನಿಸಿರುವ ಅತ್ಯಧಿಕ ಪ್ರಮಾಣದ ಮುದ್ರಣ ಗುರಿಯನ್ನು ವಿಧಿಸಿದೆ ಎಂದು ಹೇಳಿದೆ.
2013ರಲ್ಲಿ ಬೆಲ್ಟ್ ಆ್ಯಂಡ್‌ ರೋಡ್‌ ಯೋಜನೆಯನ್ನು ಆರಂಭಿಸಿದ ಎರಡು ವರ್ಷಗಳಲ್ಲಿ ಥಾಯ್ಲಂಡ್‌, ಬಾಂಗ್ಲಾದೇಶ, ಶ್ರೀಲಂಕಾ, ಮಲೇಷ್ಯಾ, ಭಾರತ, ಬ್ರಝಿಲ್‌ ಮತ್ತು ಪೋಲಂಡ್‌ ದೇಶಗಳ ಕರೆನ್ಸಿ ಉತ್ಪಾದನೆ ಯೋಜನೆಯ ಗುತ್ತಿಗೆಗಳನ್ನು ಯಶಸ್ವಿಯಾಗಿ ಪಡೆಯಲಾಗಿದೆ ಎಂದು ಚೀನಾ ಬ್ಯಾಂಕ್‌ ನೋಟ್‌ ಪ್ರಿಂಟಿಂಗ್‌ ಆ್ಯಂಡ್‌ ಮಿಂಟಿಂಗ್‌ ಕಾರ್ಪೊರೇಶನ್‌ ಅಧ್ಯಕ್ಷ ಲಿಯು ಗೀಶೆಂಗ್‌ ಅವರು ಹೇಳಿರುವುದಾಗಿ ವರದಿ ತಿಳಿಸಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅವರು, ಈ ಸುದ್ದಿ ನಿಜವೇ ಆಗಿದ್ದರೆ, ಇದರಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. 
ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಮತ್ತು ಪಿಯೂಷ್ ಗೋಯಲ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ತರೂರ್ ಟ್ವೀಟ್ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರದಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಹೊರ ಬಂದಿಲ್ಲ.
SCROLL FOR NEXT