ದೇಶ

ಕೇವಲ ರಾಷ್ಟ್ರಗೀತೆ ಹಾಡುವುದೇ ರಾಷ್ಟ್ರೀಯತೆ ಅಲ್ಲ: ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಪುತ್ರ

Lingaraj Badiger
ನವದೆಹಲಿ: ಕೇವಲ ರಾಷ್ಟ್ರಗೀತೆ ಅಥವಾ ವಂದೇ ಮಾತರಂ ಹಾಡುವುದೇ ರಾಷ್ಟ್ರೀಯತೆ ಅಲ್ಲ. ರಾಷ್ಟ್ರೀಯತೆ ಕುರಿತ ನಮ್ಮ ವಿಚಾರಧಾರೆ ಬದಲಾಗಬೇಕು ಎಂದು ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಪುತ್ರ ಅನಿಲ್ ಶಾಸ್ತ್ರಿ ಅವರು ಬುಧವಾರ ಹೇಳಿದ್ದಾರೆ.
72ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬಗ್ಗೆ ಮಾತನಾಡಿರುವ ಅನಿಲ್ ಶಾಸ್ತ್ರಿ, 1965ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದ ವೇಳೆ ಪ್ರಧಾನಿಯಾಗಿ ಶಾಸ್ತ್ರಿ ಅವರು ತೆಗೆದುಕೊಂಡ ಕೆಲವು ಕಠಿಣ ನಿರ್ಧಾದಿಂದಾಗಿ ಅವರು ಭಾರತೀಯರ ಮನ ಗೆದ್ದಿದ್ದರು ಎಂದು ಹೇಳಿದ್ದಾರೆ.
ರಾಷ್ಟ್ರೀಯತೆ ಬಗ್ಗೆ ನಾವು ಜನರಲ್ಲಿ ಅರಿವು ಮೂಡಿಸುವ ಅಗತ್ಯ ಇದೆ. ಈ ದೇಶದಲ್ಲಿ ಯಾವುದೇ ಒಬ್ಬ ವ್ಯಕ್ತಿಯು ತನ್ನ ಜಾತಿ, ಧರ್ಮ, ಭಾಷೆಗಿಂತ ಮೊದಲು ತಾನು ಒಬ್ಬ ಭಾರತೀಯನೆಂದು ಭಾವಿಸಬೇಕು. ಕೇವಲ ರಾಷ್ಟ್ರಗೀತೆ ಅಥವಾ ವಂದೇ ಮಾತರಂ ಹಾಡುವುದೇ ರಾಷ್ಟ್ರೀಯತೆ ಅಲ್ಲ. ಅವರು ಯೋಚಿಸುವ ರೀತಿಯಲ್ಲಿ ಬದಲಾವಣೆ ತರಬೇಕಾಗಿದೆ. ಪ್ರತಿ ಭಾರತೀಯರಲ್ಲಿಯೂ ರಾಷ್ಟ್ರೀಯತೆಯ ಭಾವವನ್ನು ಹುಟ್ಟುಹಾಕಲು ನಾವು ಶಾಲಾ ಮಟ್ಟದಲ್ಲಿಯೇ ಅದನ್ನು ಆರಂಭಿಸಬೇಕು ಎಂದಿದ್ದಾರೆ.
ಉದಾಹರಣೆಗೆ, ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯದ ಬಗ್ಗೆ ಮಾತನಾಡಿದಾಗ ಇಡೀ ದೇಶವೇ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಒಂದಾಗಿತ್ತು. ಇದಕ್ಕೆ ರಾಷ್ಟ್ರೀಯತೆಯೇ ಕಾರಣ. ಧರ್ಮ ಮತ್ತು ಜಾತಿಗೆ ಹೆಚ್ಚು ಪ್ರಾಮುಖ್ಯತೆ ಕೊಡದೆ, ಆರಂಭಿಕ ಹಂತದಲ್ಲಿ ರಾಷ್ಟ್ರೀಯತೆ ಬಗ್ಗೆ ಹೇಳಿಕೊಡಬೇಕು ಎಂದಿದ್ದಾರೆ.
SCROLL FOR NEXT