ದೇಶ

ಒಂದೇ ಒಂದು ಬಾರಿ ಅವರ ಭಾಷಣ ಕೇಳಬೇಕು ಎಂದೆನಿಸುತ್ತಿದೆ: ವಾಜಪೇಯಿ ಕುಟುಂಬಸ್ಥರು

Srinivasamurthy VN
ನವದೆಹಲಿ: ಅಟಲ್ ಬಿಹಾರಿ ವಾಜಪೇಯಿ ಅವರಿಂದ ಭಾಷಣವನ್ನು ಮತ್ತೊಮ್ಮೆ ಕೇಳಬೇಕು ಎಂದೆನಿಸುತ್ತಿದೆ ಎಂದು ಅವರ ಕುಟುಂಬಸ್ಥರು ಹೇಳಿಕೊಂಡಿದ್ದಾರೆ.
ಮಾಜಿ ಪ್ರಧಾನಿ ಮತ್ತು ಭಾರತರತ್ನ ಪುರಸ್ಕೃತ ವಾಜಪೇಯಿ ಅವರು ವಯೋ ಸಹಜ ಅನಾರೋಗ್ಯಕ್ಕೀಡಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ಕ್ಷೀಣಿಸುತ್ತಿದೆ. ಈ ಹಿನ್ನಲೆಯಲ್ಲಿ ಇಂದು ಅವರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರ ಸಹೋದರ ಸಂಬಂಧಿ ಕಾಂತಿ ಮಿಶ್ರಾ ಅವರು, ವಾಜಪೇಯಿ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಹರಸಿದರು. ಅವರು ಬೇಗ ಗುಣಮುಖರಾಗಿ ಮನೆಗೆ ವಾಪಸ್ ಆಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರಿಂದ ನಾನು ಒಂದು ಭಾಷಣೆವನ್ನು ಕೇಳಬೇಕು ಎಂದೆನಿಸುತ್ತಿದೆ ಎಂದು ಕಾಂತಿ ಮಿಶ್ರಾ ಹೇಳಿದ್ದಾರೆ.
ಈ ಹಿಂದೆ ಅವರು ಸಂಸತ್ ನಲ್ಲಿ ಮಾಡಿದ್ದ ಭಾಷಣವನ್ನು ನಾವು ಎಂದು ಮರೆಯಲು ಸಾಧ್ಯವಿಲ್ಲ. ಇಂದಿಗೂ ಆ ಭಾಷಣ ನಮ್ಮ ಕಣ್ಣಮುಂದಿದ್ದು, ಮತ್ತೊಮ್ಮೆ ಅವರಿಂದ ಭಾಷಣ ಕೇಳಬೇಕು ಎಂದೆನಿಸುತ್ತಿದೆ ಎಂದು ಕಾಂತಿ ಮಿಶ್ರಾ ಹೇಳಿದ್ದಾರೆ.
ಏಮ್ಸ್ ಆಸ್ಪತ್ರೆ ಬಳಿ ಭಾರಿ ಭದ್ರತೆ, ಅಂಗಡಿ ಮುಂಗಟ್ಟುಗಳು ಸ್ಥಗಿತ
ಮತ್ತೊಂದೆಡೆ ವಾಜಪೇಯಿ ಅವರು ಚಿಕಿತ್ಸೆ ಪಡೆಯುತ್ತಿರುವ ಏಮ್ಸ್ ಆಸ್ಪತ್ರೆ ಅವರಣದಲ್ಲಿ ಭಾರಿ ಪ್ರಮಾಣದ ಭದ್ರತೆ ಒದಗಿಸಲಾಗಿದ್ದು, ಈಗಾಗಲೇ ಆಸ್ರತ್ರೆಯ ಹೊರರೋಗಿಗಳ ವಿಭಾಗವನ್ನು ಸ್ಥಗಿತಗೊಳಿಸಲಾಗಿದೆ. ಅಂತೆಯೇ ಯಾವುದೇ ರೀತಿಯ ಹೋರ ವ್ಯಕ್ತಿಗಳು ಆಸ್ಪತ್ರೆಗೆ ಬರದಂತೆ ತಡೆಯಲಾಗುತ್ತಿದೆ. ಅಂತೆಯೇ ಆಸ್ಪತ್ರೆ ಆವರಣದಲ್ಲಿದ್ದ ಎಲ್ಲ ರೀತಿಯ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗುತ್ತಿದೆ. ಅಲ್ಲದೆ ಏಮ್ಸ್ ಆಸ್ಪತ್ರೆಯ ಸುತ್ತಮುತ್ತಲಿನ ರಸ್ತೆಗಳಲ್ಲಿನ ವಾಹನ ಸಂಚಾರವನ್ನು ನಿಷೇಧಿಸಲಾಗುತ್ತಿದ್ದು, ಸವಾರರಿಗೆ ಪರ್ಯಾಯ ಮಾರ್ಗ ಸೂಚಿಸಲಾಗುತ್ತಿದೆ. 
ವಾಜಪೇಯಿ ಆರೋಗ್ಯದ ಕುರಿತು ಇಂದು ಸಂಜೆ ಏಮ್ಸ್ ಆಸ್ಪತ್ರೆ ಅಧಿಕಾರಿಗಳು ಮತ್ತೊಂದು ಪತ್ರಿಕಾ ಪ್ರಕಟಣೆ ನೀಡುವುದಾಗಿ ಹೇಳಿದ್ದಾರೆ. 
SCROLL FOR NEXT