ತಿರುವನಂತಪುರ: ಧಾರಾಕಾರ ಮಳೆ, ತುಂಬಿ ಉಕ್ಕಿ ಹರಿಯುತ್ತಿರುವ ನದಿಗಳು ಮತ್ತು ಸರಣಿ ಭೂ ಕುಸಿತಗಳಿಂದ ಕೇರಳ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 97ಕ್ಕೇರಿದೆ. ಅನಧಿಕೃತ ವರದಿಗಳ ಪ್ರಕಾರ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಿದೆ.
ನಿನ್ನೆ ಮಳೆ ಸಂಬಂಧಿ ಅವಘಡಗಳಿಂದ ಕೇರಳದಲ್ಲಿ 30 ಮಂದಿ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ ಸರಾಸರಿ ಮಳೆಗಿಂತ 10 ಪಟ್ಟು ಹೆಚ್ಚು ಮಳೆ ಸುರಿದಿದೆ. ಹವಾಮಾನ ಇಲಾಖೆ ವರದಿ ಪ್ರಕಾರ ನಾಳೆಯವರೆಗೆ ಧಾರಾಕಾರ ಮಳೆ ರಾಜ್ಯದಲ್ಲಿ ಮುಂದುವರಿಯಲಿದೆ.
ಉತ್ತರದಲ್ಲಿ ಕಾಸರಗೋಡು ಜಿಲ್ಲೆಯಿಂದ ದಕ್ಷಿಣದಲ್ಲಿ ತಿರುವನಂತಪುರದವರೆಗೆ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿದ್ದು ಕೇರಳದಲ್ಲಿರುವ 39 ಅಣೆಕಟ್ಟುಗಳಲ್ಲಿ 35 ಅಣೆಕಟ್ಟೆಗಳಿಂದ ನೀರನ್ನು ಹೊರಬಿಡಲಾಗಿದೆ. ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಪ್ರವಾಹದಿಂದಾಗಿ ಆಗಸ್ಟ್ 26ರವರೆಗೆ ವಿಮಾನಗಳ ಹಾರಾಟ, ಆಗಮನ ಮತ್ತು ಕಾರ್ಯನಿರ್ವಹಣೆಯನ್ನು ಮುಚ್ಚಲಾಗಿದೆ. ಕೊಚ್ಚಿ ಮೆಟ್ರೊ ಸೇವೆಯನ್ನು ಆರಂಭಿಸಿದೆ.
ಈ ಮಧ್ಯೆ ರಾಜ್ಯದ ಶಾಲೆಗಳಲ್ಲಿ ಓಣಂ ರಜೆಯನ್ನು ನಿನ್ನೆಯಿಂದ ಆಗಸ್ಟ್ 29ರವರೆಗೆ ನೀಡಲಾಗಿದೆ.