ದೇಶ

ವಾಜಪೇಯಿ ಅಂತ್ಯಸಂಸ್ಕಾರಕ್ಕೆ ಗೈರಾಗಿ, ಇಮ್ರಾನ್ ಖಾನ್ ಪ್ರಮಾಣದಲ್ಲಿ ಭಾಗಿಯಾದ ಸಿಧು: ವಿವಾದ

Manjula VN
ನವದೆಹಲಿ: ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಅಂತ್ಯಸಂಸ್ಕಾರಕ್ಕೆ ಗೈರು ಹಾಜರಾಗಿ, ಪಾಕಿಸ್ತಾನದ ನೂತನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್ ಮುಖಂಡ ನವಜೇತ್ ಸಿಂಗ್ ಸಿಧು ಅವರು ಪಾಲ್ಗೊಂಡಿದ್ದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. 
ಪಂಜಾಬ್ ರಾಜ್ಯದ ಕಾಂಗ್ರೆಸ್ ಸಚಿವರಾಗಿರುವ ಸಿಧು ಅವರು ಶುಕ್ರವಾರ ನಡೆದಿದ್ದ ಮಾಜಿ ಪ್ರಧಾನಿ ವಾಜಪೇಯಿಯವರ ಅಂತ್ಯಸಂಸ್ಕಾರಕ್ಕೆ ಗೈರು ಹಾಜರಾಗಿ, ಪಾಕಿಸ್ತಾನದಲ್ಲಿ ನಡೆದ ಇಮ್ರಾನ್ ಖಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗಿದ್ದರು. ಸಿಧು ಅವರ ಈ ನಡೆಗೆ ಹರಿಯಾಣ ಹಾಗೂ ಪಂಜಾಬ್ ರಾಜ್ಯಗಳಲ್ಲಿ ತೀವ್ರ ಖಂಡನೆ ವ್ಯಕ್ತವಾಗತೊಡಗಿದೆ. 
2004ರಲ್ಲಿ ಸಿಧು ರಾಜಕೀಯಕ್ಕೆ ಬರಲು ವಾಜಪೇಯಿಯವರೇ ಕಾರಣರಾಗಿದ್ದರು. ವಾಜಪೇಯಿಯವರು ವಿಧಿವಶರಾಗಿದ್ದು, ಅವರ ಅಂತ್ಯ ಸಂಸ್ಕಾರಕ್ಕೆ ಸಿಧು ಭಾಗಿಯಾಗದೇ ಪಾಕಿಸ್ತಾನಕ್ಕೆ ತೆರಳಿದ್ದು ಇದೀಗ ತೀವ್ರ ವಿರೋಧಗಳಿಗೆ ಕಾರಣವಾಗಿದೆ. 
ಇಮ್ರಾನ್ ಖಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತೆರಳಿದ್ದ ಸಿಧು ಅವರು. ತಮ್ಮನ್ನು ತಾವು ಭಾರತದ ರಾಯಭಾರಿ ಎಂದು ಕರೆದುಕೊಂಡು, ಭಾರತ-ಪಾಕಿಸ್ತಾನಕ್ಕೆ ಶುಭವಾಗಲಿ ಎಂದು ಹೇಳಿದ್ದರು. ಅಲ್ಲದೆ ಇಮ್ರಾನ್ ಅವರಿಗೆ ಉಡುಗೊರೆಯಾಗಿ ಕಾಶ್ಮೀರದ ಶಾಲ್'ನ್ನು ತೆಗೆದುಕೊಂಡು ಹೋಗಿದ್ದರು. 
ಸಿಧುರನ್ನು ಸೌಹಾರ್ದ ರಾಯಭಾರಿಯಾಗಿ ಮಾಡಿದ್ದು ಯಾರು? ಸಿಧು ಗಡಿ ದಾಟಿ ಪಾಕಿಸ್ತಾನಕ್ಕೆ ತೆರಳಿದ್ದಾಗ 32 ರಾಷ್ಟ್ರೀಯ ರೈಫಲ್ಸ್'ನ ಯೋಧ ಮತ್ತು ಮಹಿಳೆ ಸೇರಿ ಇಬ್ಬರು ನಾಗರೀಕರನ್ನು ಪಾಕಿಸ್ತಾನ ಮೂಲಕ ಉಗ್ರರು ಹತ್ಯೆ ಮಾಡಿದ್ದರು. ಎಂತಹ ಸೌಹಾರ್ದತೆ ಬಗ್ಗೆ ಸಿಧು ಮಾತನಾಡುತ್ತಿದ್ದಾರೆಂದು ನಿವೃತ್ತ ಕರ್ನಲ್ ಕೈಲಾಶ್ ದಾರ್ ಪ್ರಶ್ನಿಸಿದ್ದಾರೆ. 
SCROLL FOR NEXT