ದೇಶ

ಆಳ್ವಾರ್ ರಕ್ಬರ್ ಖಾನ್ ಹತ್ಯೆ ಪ್ರಕರಣ: ರಾಜಸ್ಥಾನ ಸರ್ಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

Manjula VN
ಜೈಪುರ: ಹಸು ಕಳ್ಳ ಸಾಗಾಟದ ಶಂಕೆಯಿಂದ ಗುಂಪು ದಾಳಿಗೆ ಒಳಗಾಗಿ ಮೃತಪಟ್ಟಿದ್ದ ರಕ್ಬರ್ ಖಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಪ್ರತಿಕ್ರಿಯೆ ನೀಡುವಂತೆ ರಾಜಸ್ಥಾನ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೋಮವಾರ ಸೂಚನೆ ನೀಡಿದೆ. 
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಸರ್ಕಾರದ ವಿರುದ್ಧ ತುಶಾರ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕ ತೆಹ್ಸೀನ್ ಪೂನಾವಾಲಾ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಇಂದು ಪರಿಶೀಲನೆ ನಡೆಸಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿದ್ದ ಪೀಠ, ಪ್ರಕರಣ ಕುರಿತು ಈವರೆಗೂ ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿಗಳನ್ನು ನೀಡುವಂತೆ ರಾಜಸ್ಥಾನ ಸರ್ಕಾರದ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದೆ. 
ಹಸುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪ ಮೇಲೆ ರಕ್ಬರ್ ಖಾನ್ ಅವರನ್ನು ಗೊಂಡು ಆಳ್ವಾರ್ ಜಿಲ್ಲೆಯ ರಾಮ್ಗರ್ಹ್ ಪ್ರದೇಶದಲ್ಲಿ ಜು.20 ರಂದು ಹತ್ಯೆ ಮಾಡಿತ್ತು. 
ಪ್ರಕರಣ ಸಂಬಂಧ ತುಶಾರ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕ ತೆಹ್ಸೀನ್ ಅವರು ರಾಜಸ್ಥಾನ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. 
ಸಾಮೂಹಿಕ ಗುಂಪುಗಳ ಥಳಿತ, ಗೋವು ಸಾಗಣೆ ಕುರಿತಂತೆ ನ್ಯಾಯಾಲಯದ ಆದೇಶ ನೀಡಿದ್ದರೂ, ಇಂತಹ ಘಟನೆಗಳು ನಡೆಯುತ್ತಿದ್ದು ರಾಜಸ್ಥಾನ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. 
SCROLL FOR NEXT