ದೇಶ

ಪಾಕ್ ಸೇನಾ ಮುಖ್ಯಸ್ಥರಿಗೆ ಸಿಧು ಆಲಿಂಗನದ ಬಗ್ಗೆ ಸ್ವತಃ ಆಕ್ಷೇಪ ವ್ಯಕ್ತಪಡಿಸಿದ ಪಂಜಾಬ್ ಸಿಎಂ!

Srinivas Rao BV
ಇಮ್ರಾನ್ ಖಾನ್ ಪಾಕಿಸ್ತಾನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಕಾರ್ಯಕ್ರಮಕ್ಕೆ ತೆರಳಿ ಪಾಕ್ ಸೇನಾ ಮುಖ್ಯಸ್ಥರನ್ನು ಆಲಿಂಗಿಸಿಕೊಂಡಿದ್ದ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದು, ಸ್ವತಃ ಪಂಜಾಬ್ ಮುಖ್ಯಮಂತ್ರಿಗಳೇ ಈ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 
ಸಿಧು ಅವರು ಪಾಕ್ ಸೇನಾ ಮುಖ್ಯಸ್ಥರನ್ನು ಆಲಿಂಗಿಸಿಕೊಂಡ ನಡೆ ಸರಿಯಲ್ಲ, ಗಡಿಯಲ್ಲಿ ಪ್ರತಿ ದಿನ ಭಾರತೀಯ ಯೋಧರು ಸಾವಿಗೀಡಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಾಕ್ ಸೇನಾ ಮುಖ್ಯಸ್ಥರನ್ನು ಸಿಧು ಆಲಿಂಗಿಸಿಕೊಂಡಿದ್ದು ಸರಿಯಲ್ಲ ಎಂದು ಸಿಎಂ ಅಮರಿಂದರ್ ಸಿಂಗ್ ಮಾಧ್ಯಮಗಳಿಗೆ ಹೇಳಿದ್ದಾರೆ. 
ಭಾರತೀಯ ಯೋಧರನ್ನು ಹತ್ಯೆ ಮಾಡುವುದಕ್ಕೆ ಪಾಕಿಸ್ತಾನದ ಸೇನಾ ಮುಖ್ಯಸ್ಥರೇ ಆದೇಶ ನೀಡುತ್ತಾರೆ, ನವಜೋತ್ ಸಿಂಗ್ ಸಿಧು ಅವರೆಡೆಗೆ  ಆತ್ಮೀಯತೆ ತೋರುವುದು ಸರಿಯಲ್ಲ. ಅಂತಹ ಯಾವುದೇ ನಡೆಯನ್ನು ಅವರು ತಪ್ಪಿಸಬಹುದಿತ್ತು ಎಂದು ಅಮರಿಂದರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. 
ಇನ್ನು ಪಿಒಕೆ ಅಧ್ಯಕ್ಷರ ಪಕ್ಕದಲ್ಲಿ ಕುಳಿತುಕೊಳ್ಳುವುದರ ಬಗ್ಗೆಯೂ ಅಮರಿಂದರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ಸಿಧು ಅವರಿಗೆ ಅವರು ಯಾರು ಎಂದು ಗೊತ್ತಿರಲಿಲ್ಲ, ಆಸನದ ಆಯ್ಕೆ ಅವರಿಗೆ ಇರಲಿಲ್ಲ ಎಂದು ಹೇಳಿದ್ದಾರೆ. 
SCROLL FOR NEXT