ಕೇರಳ ಪ್ರವಾಹ: ಪರಿಹಾರ ಕಾರ್ಯಾಚರಣೆಗೆ ಭಾರತ ವಿದೇಶಿ ದೇಣಿಗೆಯನ್ನು ಸ್ವೀಕರಿಸುವುದು ಅನುಮಾನ?!
ನವದೆಹಲಿ: ಕೇರಳ ಪ್ರವಾಹ ಪರಿಸ್ಥಿತಿಯನ್ನು ನಿರ್ವಹಣೆ ಮಾಡಲು, ರಕ್ಷಣಾ ಕಾರ್ಯಾಚರಣೆ, ಪುನರ್ವಸತಿಗಾಗಿ ಯುಎಇ ಸುಮಾರು 700 ಕೋಟಿ ರೂಪಾಯಿಗಳಷ್ಟು ನೆರವು ನೀಡಲು ಮುಂದಾಗಿದೆ. ಆದರೆ ಸರ್ಕಾರ ಯಾವುದೇ ವಿದೇಶಿ ಆರ್ಥಿಕ ನೆರವನ್ನು ಸ್ವೀಕರಿಸದೇ ಇರಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಈ ಬಗ್ಗೆ ಪಿಟಿಐ ನಲ್ಲಿ ವರದಿ ಪ್ರಕಟವಾಗಿದ್ದು, ಸಂಪೂರ್ಣವಾಗಿ ದೇಶದ ಆರ್ಥಿಕ ನೆರವಿನಲ್ಲೇ ಕೇರಳ ಪ್ರವಾಹ ಪರಿಸ್ಥಿತಿಯನ್ನು ನಿರ್ವಹಣೆ ಮಾಡಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಯುಎಇಯ ನ ರಾಜ ಶೇಖ್ ಮೊಹಮ್ಮದ್ ಬಿನ್ ಝಯೀದ್ ಅಲ್ ನಹ್ಯಾನ್ ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿದ್ದು, ಸುಮಾರು 700 ಕೋಟಿ ರೂ ಆರ್ಥಿಕ ನೆರವು ನೀಡುವುದಾಗಿ ಹೇಳಿದ್ದನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದರು.
ಅರಬ್ ನಲ್ಲಿ ಕೆಲಸ ಮಾಡುವ ಭಾರತೀಯರ ಸಂಖ್ಯೆ ಹೆಚ್ಚಿದ್ದು ಈ ಪೈಕಿ ಶೇ.80 ರಷ್ಟು ಜನರು ಕೇರಳದವರಾಗಿದ್ದಾರೆ. ಇನ್ನು ಯುಎಇ ಜೊತೆಗೆ ಮಾಲ್ಡೀವ್ಸ್ ಸರ್ಕಾರವೂ ಸುಮಾರು 35 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲು ಮುಂದಾಗಿದೆ. ಆದರೆ ಭಾರತ ಸರ್ಕಾರ ವಿದೇಶಿ ಆರ್ಥಿಕ ನೆರವನ್ನು ಸ್ವೀಕರಿಸುವುದು ಅನುಮಾನ ಎನ್ನಲಾಗುತ್ತಿದೆ.