ದೆಹಲಿ: ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ. ಬೇಕಾಬಿಟ್ಟಿ ಮಾತನಾಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕರಿಗೆ ರಿಲಯನ್ಸ್ ಗ್ರೂಪ್ ಬುಧವಾರ ಎಚ್ಚರಿಕೆ ನೀಡಿದೆ.
ರಫೆಲ್ ಅವ್ಯವಹಾರದಲ್ಲಿ ರಿಲಯನ್ಸ್ ಪಾತ್ರವಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಗ್ರೂಪ್ ನ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್, ರಿಲಯನ್ಸ್ ಡಿಫೆನ್ಸ್ ಮತ್ತು ರಿಲಯನ್ಸ್ ಏರೋಸ್ಟ್ರಕ್ಚರ್ ಕಂಪನಿಗಳು ಕಾಂಗ್ರೆಸ್ ವಕ್ತಾರ ಜೈವೀರ್ ಶೆರ್ ಗಿಲ್ ಅವರಿಗೆ ನೊಟೀಸ್ ನೀಡಿದ್ದು, ಒಂದು ವೇಳೆ ಕಂಪನಿ ವಿರುದ್ಧ ಮಾತನಾಡುವುದನ್ನು ಮುಂದುವರೆಸಿದಲ್ಲಿ, ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿವೆ.
ರಾಜಕಾರಣಿಗಳಿಗೆ ಮಾತನಾಡುವ ಹಕ್ಕಿದೆ ಎಂದ ಮಾತ್ರಕ್ಕೆ ಅವರು ಬೇಜವಬ್ದಾರಿಯಾಗಿ ಹೇಳಿಕೆ ನೀಡಬಹದು ಎಂದು ಎಲ್ಲಿಯೂ ಬರೆದಿಲ್ಲ! ಬೇಕಾಬಿಟ್ಟಿ ಮಾತನಾಡುವುದು, ಅಸಂಬದ್ಧ ಹೇಳಿಕೆ ನೀಡುವುದು, ಸುಳ್ಳು ಆರೋಪ ಮಾಡುವುದು ಇವೆಲ್ಲವನ್ನೂ ನಾವು ಸಹಿಸೋಲ್ಲ. ಇಂಥ ಕೆಲಸ ಮಾಡಿದರೆ ಕಾನೂನಾತ್ಮಕ ಕ್ರಮ ಎದುರಿಸಬೇಕಾಗುತ್ತದೆ ಎಂದು ರಿಲಯನ್ಸ್ ಗ್ರೂಪ್, ಎಚ್ಚರಿಸಿದೆ.
ನೋಟಿಸ್ ನಲ್ಲಿ ಕಾಂಗ್ರೆಸ್ ನಾಯಕರಾದ ರಂದೀಪ್ ಸುರ್ಜೇವಾಲ, ಅಶೋಕ್ ಚವ್ಹಾಣ್, ಸಂಜಯ್ ನಿರೂಪಮ್, ಅನುರಾಗ್ ನಾರಾಯಣ್ ಸಿಂಗ್ ಓಮನ್ ಚಾಂಡಿ, ಶಕ್ತಿ ಸಿನ್ಹಾ ಗೋಹಿಲ್, ಅಭಿಶೇಕ್ ಮನು ಸಿಂಘ್ವಿ, ಸುನಿಲ್ ಕುಮಾರ್ ಜಾಖರ್ ಹಾಗೂ ಪ್ರಿಯಾಂಕ ಚತರ್ವೇದಿ ಅವರ ಹೆಸರನ್ನು ಉಲ್ಲೇಖಿಸಲಾಗಿದ್ದು, ಈ ಎಲ್ಲಾ ನಾಯಕರು ನಮ್ಮ ಕಂಪನಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೂರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics