ನವದೆಹಲಿ: ಕೇರಳ ಪ್ರವಾಹವನ್ನು ಗಮನದಲ್ಲಿಟ್ಟುಕೊಂಡು ಆಗಸ್ಟ್ 31 ರವರೆಗೂ ತಮಿಳುನಾಡಿನ ಮುಲ್ಲಪೆರಿಯಾರ್ ಜಲಾಶಯದಲ್ಲಿ 139 ಅಡಿಯವರೆಗೂ ನೀರು ಇರುವಂತೆ ನಿರ್ವಹಣೆ ಮಾಡುವಂತೆ ಸುಪ್ರೀಂಕೋರ್ಟ್ ಇಂದು ಆದೇಶ ನೀಡಿದೆ.
ಕೇಂದ್ರ ಸರ್ಕಾರ ಸಲ್ಲಿಸಿದ್ದ ಮುಲ್ಲಪೆರಿಯಾರ್ ಡ್ಯಾಂ ಉಪಸಮಿತಿ ಸಭೆಯಲ್ಲಿನ ಮಾಹಿತಿಯನ್ನು ಪರಿಗಣಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ. ಖನ್ವೀಲ್ ಕರ್ ಮತ್ತು ಡಿ. ವೈ. ಚಂದ್ರಚೂಡ್ ಅವರಿದ್ದ ತ್ರಿಸದಸ್ಯ ಪೀಠ, ಜಲಾಶಯದಲ್ಲಿನ ನೀರಿನ ಮಟ್ಟ 139 ಅಡಿಯವರೆಗೂ ಇರುವಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದೆ.
ಇದು ಸುಪ್ರೀಂ ಕೋರ್ಟ್ ನಿಂದ ನಿಗದಿಪಡಿಸಲಾದ ಅನುಮತಿ ಮಿತಿಗಿಂತ ಎರಡು ಅಡಿಗಳಷ್ಟು ಕಡಿಮೆ ಇದೆ. ವಿಪತ್ತು ನಿರ್ವಹಣೆಯ ಅಂಶಕ್ಕೆ ಅದು ಸ್ವತಃ ಸೀಮಿತವಾಗಲಿದೆ ಎಂದು ಪೀಠ ಸ್ಪಷ್ಪಪಡಿಸಿದ್ದು, ಕೇರಳಕ್ಕೆ ವಿನಾಶಕಾರಿ ಪ್ರವಾಹ ಬಾರದಿರಲಿ ಎಂಬ ದೃಷ್ಟಿಯಲ್ಲಿ ಜಲಾಶಯದಲ್ಲಿನ ನೀರಿನ ಮಟ್ಟವನ್ನು ಕಡಿಮೆಗೊಳಿಸಿ ಆದೇಶ ನೀಡಲಾಗಿದೆ ಎಂದು ಹೇಳಿದೆ.
ಕೇರಳ ಆರೋಪ ತಳ್ಳಿಹಾಕಿದ ತಮಿಳುನಾಡು ಮುಖ್ಯಮಂತ್ರಿ
ಮುಲ್ಲಪೆರಿಯಾರ್ ಜಲಾಶಯದಿಂದ ನೀರು ಬಿಡುಗಡೆಯಾದ ಒಂದು ವಾರದ ನಂತರ ಕೇರಳದಲ್ಲಿ ಪ್ರವಾಹ ಉಂಟಾಗಿದೆ. ನೀರು 139, 141, ಮತ್ತು 142 ಅಡಿಯವರೆಗೂ ಇದ್ದಾಗ ಮೂರು ಹಂತದಲ್ಲಿ ಎಚ್ಚರಿಕೆಯಿಂದ ನೀರು ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.