ನವದೆಹಲಿ: ಅಕ್ರಮ ಬಾಂಗ್ಲಾ ವಲಸಿಗರನ್ನು ಗುರುತಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಎನ್ ಆರ್ ಸಿ ಬಗ್ಗೆ ಅಸ್ಸಾಂ ನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೋಯ್ ಪ್ರತಿಕ್ರಿಯೆ ನೀಡಿದ್ದು, ಎನ್ ಆರ್ ಸಿ ಯ ಉದ್ದೇಶ ವಿಫಲವಾಗಿದೆ ಎಂದು ಹೇಳಿದ್ದಾರೆ.
40 ಲಕ್ಷ ಜನರನ್ನು ಭಾರತೀಯರಲ್ಲ ಎಂದು ಗುರುತಿಸಲಾಗಿದೆ. ಈ ಪೈಕಿ ಬಹುತೇಕರು ಭಾರತೀಯರೇ ಆಗಿದ್ದು, ಎನ್ ಆರ್ ಸಿ ಉದ್ದೇಶವೇ ಸಂಪೂರ್ಣ ವಿಫಲವಾದಂತಿದೆ ಎಂದು ಗೋಗೋಯ್ ಅಭಿಪ್ರಾಯಪಟ್ಟಿದ್ದಾರೆ.
2010 ರಲ್ಲಿ ಎನ್ಆರ್ ಸಿ ಯೋಜನೆ ಪ್ರಾರಂಭವಾಯಿತು. ಯೋಜನೆ ಬಗ್ಗೆ ಅಸಮಾಧಾನ ಉಂಟಾದ ಹಿನ್ನೆಲೆಯಲ್ಲಿ ಅದನ್ನು ಸ್ಥಗಿತಗೊಳಿಸಲಾಯಿತು, ನಂತರ ಎಲ್ಲಾ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಜಾರಿಗೊಳಿಸಲು ನಾನು ಸಂಪುಟ ಸಮಿತಿ ರಚಿಸಿದ್ದೆ. ಅಕ್ರಮ ಬಾಂಗ್ಲಾ ವಲಸಿಗರ್ನನು ಗುರುತಿಸಲು ನಾವು ಸಿದ್ಧಪಡಿಸಿದ್ದ ವಿಧಾನಗಳನ್ನು ರಿಜಿಸ್ಟಾರ್ ಜನರಲ್ ಆಫ್ ಇಂಡಿಯಾ ಬಹುತೇಕ ಒಪ್ಪಿತ್ತು ಎಂದು ತರುಣ್ ಗೊಗೋಯ್ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಹಾಗೂ ರಿಜಿಸ್ಟಾರ್ ಜನರಲ್ ಆಫ್ ಇಂಡಿಯಾಗೆ ಈ ಎನ್ ಆರ್ ಸಿ ಪರಿಕಲ್ಪನೆ ಸ್ಪಷ್ಟವಾಗಿಲ್ಲ, ಈ ಹಿನ್ನೆಲೆಯಲ್ಲಿ ಯೋಜನೆಯನ್ನು ತಪ್ಪಾಗಿ ಜಾರಿ ಮಾಡಲಾಗುತ್ತಿದೆ ಎಂದು ತರುಣ್ ಗೊಗೋಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.