ದೇಶ

ಬಂಧಿತ ಹೋರಾಟಗಾರರಿಗೆ ನಕ್ಸಲ್ ನಂಟಿರುವ ಬಗ್ಗೆ ಯಾವತ್ತೂ ಕೇಳಿಲ್ಲ: ಶರದ್ ಪವಾರ್

Lingaraj Badiger
ನವದೆಹಲಿ: ದೇಶದ ವಿವಿಧ ನಗರಗಳಲ್ಲಿ ದಾಳಿ ನಡೆಸಿ ಐವರು ಹೋರಾಟಗಾರರನ್ನು ಬಂಧಿಸಿದ ಪೊಲೀಸರ ಕ್ರಮವನ್ನು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ತೀವ್ರವಾಗಿ ಖಂಡಿಸಿದ್ದು, ಅವರಿಗೆ ನಕ್ಸಲರ ನಂಟಿರುವ ಬಗ್ಗೆ ನಾನು ಯಾವತ್ತೂ ಕೇಳಿಲ್ಲ ಎಂದು ಬುಧವಾರ ಹೇಳಿದ್ದಾರೆ.
ಬಂಧಿತ ಹೋರಾಟಗಾರರ ಪೈಕಿ ಕನಿಷ್ಠ ನನ್ನ ರಾಜ್ಯದ ಹೋರಾಟಗಾರರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಅವರಿಗೆ ನಕ್ಸಲರ ನಂಟಿರುವ ಬಗ್ಗೆ ನಾನು ಯಾವತ್ತೂ ಕೇಳಿಲ್ಲ. ನಕ್ಸಲ್ ನಂಟಿನ ಆರೋಪದ ಮೇಲೆ ಅವರನ್ನು ಬಂಧಿಸಿರುವುದು ದುರದೃಷ್ಟಕರ ಎಂದು ಶರದ್ ಪವಾರ್ ಅವರು ಹೇಳಿದ್ದಾರೆ.
ಬಂಧಿತ ಮಾನವ ಹಕ್ಕುಗಳ ಹೋರಾಟಗಾರರನ್ನು ಮತ್ತು ಅವರ ಕುಟುಂಬವನ್ನು ನಾನು ಭೇಟಿ ಮಾಡುತ್ತೇನೆ. ಅಲ್ಲದೆ ಆ ಪ್ರದೇಶದ ಸ್ಥಳೀಯ ಜನರೊಂದಿಗೆ ಹೋರಾಟಗಾರರ ಬಗ್ಗೆ ಚರ್ಚಿಸುತ್ತೇನೆ ಎಂದು ಮಾಜಿ ಕೇಂದ್ರ ಸಚಿವರು ತಿಳಿಸಿದ್ದಾರೆ.
ನಿನ್ನೆ ದೇಶದ ವಿವಿಧ ನಗರಗಳಲ್ಲಿ ದಾಳಿ ನಡೆಸಿದ್ದ ಪುಣೆ ಪೊಲೀಸರು, ಹೈದರಾಬಾದ್ ನಲ್ಲಿ ವರವರ ರಾವ್, ಮುಂಬೈನಲ್ಲಿ ಅರುಣ್ ಫೆರೀರಾ ಮತ್ತು ವರ್ನಾನ್ ಗೋನ್ಸಾಲ್ವೆಸ್, ಫರಿದಾಬಾದ್ ನಲ್ಲಿ ಸುಧಾ ಭಾರದ್ವಜ್ ಹಾಗೂ ದೆಹಲಿಯಲ್ಲಿ ಗೌತಮ್ ನವಲಾಖ ಅವರನ್ನು ಬಂಧಿಸಿದ್ದರು.
SCROLL FOR NEXT