ತಿರುವನಂತಪುರಂ : ಇತ್ತೀಚಿನ ಪ್ರವಾಹದಿಂದಾಗಿ ಪಂಪಾ ನದಿ ಬಳಿ ತೀವ್ರ ಹಾನಿ ಹಿನ್ನೆಲೆಯಲ್ಲಿ ಶಬರಿಮಲೆಗೆ ಭೇಟಿ ನೀಡುವ ಭಕ್ತಾಧಿಗಳಿಗೆ ಆನ್ ಲೈನ್ ಬುಕ್ಕಿಂಗ್ ಕಡ್ಡಾಯ ಮಾಡುವಂತೆ ಹಾಗೂ ತೀರ್ಥಯಾತ್ರೆ ವಿಂಡೋ ಮೂಲಕ ನವೆಂಬರ್ ವೇಳೆಯಲ್ಲಿನ ಭಕ್ತಾಧಿಗಳ ದಟ್ಟಣೆ ನಿಯಂತ್ರಿಸಲು ಮುಂದಾಗುವಂತೆ ಪೊಲೀಸರು ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ.
ಪ್ರವಾಹದಿಂದಾಗಿ ಹಾನಿಗೊಂಡಿರುವ ಶಬರಿಮಲೆಯಲ್ಲಿ ಮೂಲಸೌಕರ್ಯಗಳನ್ನು ಪುನರ್ ನಿರ್ಮಿಸುವ ಸಂಬಂಧ ಮುಖ್ಯಮಂತ್ರಿ ವಿಜಯ್ ಪಿಣರಾಯ್ ನೇತೃತ್ವದಲ್ಲಿ ಇಂದು ನಡೆದ ಸಭೆಯ ವೇಳೆಯಲ್ಲಿ ಕೇರಳ ರಾಜ್ಯ ಪೊಲೀಸ್ ಮುಖ್ಯಸ್ಥ ಲೊಕನಾಥ್ ಬೆಹೆರಾ ಈ ರೀತಿಯಲ್ಲಿ ಮನವಿ ಮಾಡಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಪೊಲೀಸ್ ಇಲಾಖೆಯ ಮಾಹಿತಿ ತಂತ್ರಜ್ಞಾನ ಇಲಾಖೆ ರೂಪಿಸಿರುವ ಸಾಪ್ಟ್ ವೇರ್ ನಿಂದ ಪ್ರತಿದಿನ 80 ಸಾವಿರ ಭಕ್ತಾಧಿಗಳನ್ನು ಮಾತ್ರ ಅಯ್ಯಪ್ಪನ ದರ್ಶನಕ್ಕೆ ಮಿತಿಗೊಳಿಸುವ ಸಂಬಂಧ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಭಕ್ತಾಧಿಗಳ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಆರಂಭಿಸಿದ್ದು, ಸೆಪ್ಟೆಂಬರ್ ಮೊದಲ ವಾರದಿಂದ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗುತ್ತಿದ್ದು, ಪೊಲೀಸರು ನಾಳೆ ಔಪಚಾರಿಕವಾಗಿ ಈ ಪ್ರಸ್ತಾವವನ್ನು ಘೋಷಿಸುವ ಸಾಧ್ಯತೆ ಇದೆ.
ಆನ್ ಲೈನ್ ಬುಕ್ಕಿಂಗ್ ಕಡ್ಡಾಯ ಮಾಡುವುದರಿಂದ ಭಕ್ತಾಧಿಗಳ ದಟ್ಟಣೆ ನಿಯಂತ್ರಿಸಲು ಸಹಕಾರಿಯಾಗಲಿದೆ ಎಂದು ಐಜಿ ಮನೋಜ್ ಅಬ್ರಾಹಂ ಹೇಳಿದ್ದಾರೆ.
ಆನ್ ಲೈನ್ ಬುಕ್ಕಿಂಗ್ ಮಾಡುವವರಿಗೆ ಮಾತ್ರ ನಿಲಕ್ಕಲ್ ನಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು, ಬುಕ್ಕಿಂಗ್ ಮಾಡದೆ ಬರುವ ಭಕ್ತಾಧಿಗಳನ್ನು ಹಿಂದಕ್ಕೆ ಕಳುಹಿಸಲಾಗುವುದು ಎಂದು ಮನೋಜ್ ಹೇಳಿದ್ದಾರೆ.
ಆದಾಗ್ಯೂ, ಸಾಂಪ್ರದಾಯಿಕ ಮಾರ್ಗದ ಮೂಲಕ ಶಬರಿಮಲೆ ತಲುಪುವ ಭಕ್ತಾಧಿಗಳು ಪೊಲೀಸರ ಬಳಿ ತಮ್ಮ ನಂಬರ್ ದಾಖಲಿಸಿಕೊಳ್ಳುವ ಅಗತ್ಯವಿಲ್ಲ. ಈ ಮಾರ್ಗದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಭಕ್ತಾಧಿಗಳು ಆಗಮಿಸುತ್ತಾರೆ. ಆದರೆ, ಈ ಮಾರ್ಗದಲ್ಲಿ ಎಷ್ಟು ಮಂದಿ ಬರುತ್ತಾರೆ ಎಂದು ಹೇಳಿಲಿಕ್ಕೆ ಆಗುವುದಿಲ್ಲ ಎಂದು ಮನೋಜ್ ತಿಳಿಸಿದ್ದಾರೆ.