ದೇಶ

ಆಂಧ್ರಪ್ರದೇಶ ಮುಖ್ಯಮಂತ್ರಿ ಭೇಟಿ ಮಾಡಿದ ಕುಮಾರಸ್ವಾಮಿ: ಎನ್ ಡಿಎ ಸೋಲಿಸುವುದೇ ಪ್ರಮುಖ ಗುರಿ- ಹೇಳಿಕೆ

Nagaraja AB

ವಿಜಯವಾಡ: ನೆರೆಯ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸೋಲಿಸಲು ಪ್ರಾದೇಶಿಕ ಪಕ್ಷಗಳ ಮೈತ್ರಿ ಅಗತ್ಯತೆ ಸೇರಿದಂತೆ  ಮಹತ್ವದ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

ವಿಜಯವಾಡಕ್ಕೆ ಆಗಮಿಸಿದ ಕುಮಾರಸ್ವಾಮಿ, ಕನಕ ದುರ್ಗ ದೇವರಿಗೆ ಪೂಜಿಸಿದರು. ಈ ಮಧ್ಯೆ ತಿರುಪತಿಗೆ ತೆರಳುತ್ತಿದ್ದ ವೆಂಕಯ್ಯನಾಯ್ಡು ಹೋಟೆಲ್ ನಲ್ಲಿ ತಂಗಿದ್ದ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ  ಸುಮಾರು 40 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

ಮುಂಬರುವ ದಿನಗಳಲ್ಲಿ ದಕ್ಷಿಣ ಭಾರತದಲ್ಲಿ  ಪ್ರಾದೇಶಿಕಪಕ್ಷಗಳ ಮೈತ್ರಿ ಅಗತ್ಯತೆ ಬಗ್ಗೆ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಮಾತುಕತೆ ನಡೆಸಿದ್ದಾರೆ ಎಂದು ರಾಜ್ಯ ಸಾರ್ವಜನಿಕ ಸಂಪರ್ಕ ಮತ್ತು ಮಾಹಿತಿ ಇಲಾಖೆ ತಿಳಿಸಿದೆ.

ಕೇಂದ್ರದಲ್ಲಿ ಪರ್ಯಾಯ ಶಕ್ತಿಯ ಅಗತ್ಯತೆ ಬಗ್ಗೆ ಚರ್ಚೆ ನಡೆಸಿದ ಕುಮಾರಸ್ವಾಮಿ ಹಾಗೂ ಚಂದ್ರಬಾಬು ನಾಯ್ಡು, ದಕ್ಷಿಣ ಭಾರತದಲ್ಲಿ ಎಲ್ಲಾ ಪ್ರಾದೇಶಿಕ ಪಕ್ಷಗಳು ಒಂದೇ ವೇದಿಕೆಗೆ ಬರಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ವಿಷಯದ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಸಭೆಯ ಬಳಿಕ ಚಂದ್ರಬಾಬು ನಾಯ್ಡು ಸುದ್ದಿಗಾರರಿಗೆ ತಿಳಿಸಿದರು.

ಜೆಡಿಎಸ್ ಹಾಗೂ ಟಿಡಿಪಿ ಸೋದರ ಬಾಂಧವ್ಯ ಹೊಂದಿರುವ ಪಕ್ಷಗಳಾಗಿದ್ದು, ಕೇಂದ್ರದಲ್ಲಿ ಎನ್ ಡಿಎ ಮೈತ್ರಿಕೂಟ ಸೋಲಿಸುವುದೇ ತಮ್ಮ ಪ್ರಮುಖ ಗುರಿಯಾಗಿದೆ ಎಂದು ಎಚ್. ಡಿ. ಕುಮಾರಸ್ವಾಮಿ ಹೇಳಿದರು.

ಮುಂದೆ ಯಾರು ಪ್ರಧಾನಿಯಾಗುತ್ತಾರೆ ಎಂಬುದು ಪ್ರಮುಖವಲ್ಲಾ, ಎನ್ ಡಿಎ ಸೋಲಿಸಿ ದೇಶ ರಕ್ಷಣೆ ಮಾಡುವುದೇ  ನಮ್ಮ ಪ್ರಮುಖ ಗುರಿಯಾಗಿದೆ. ಸಾಧ್ಯವಾದಷ್ಟು ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ಒಂದೇ ವೇದಿಕೆಗೆ ತರಲು ಪ್ರಯತ್ನಸಿಲಾಗುವುದು. ಈ ಸಂಬಂಧ  ಚಂದ್ರಬಾಬು ನಾಯ್ಡು ಜೊತೆಗೆ ಮಾತುಕತೆ ನಡೆಸಿರುವುದಾಗಿ ಕುಮಾರಸ್ವಾಮಿ ತಿಳಿಸಿದರು.

SCROLL FOR NEXT