ಅಧಿಕಾರ ಸ್ವೀಕರಿಸಿದ ಕಾರ್ಗಿಲ್ ಹೀರೋ ವೈಕೆ ಜೋಷಿ
ನವದೆಹಲಿ: 1999ರ ಕಾರ್ಗಿಲ್ ಯುದ್ಧದ ವೇಳೆ ತಮ್ಮ ಪ್ರಾಣದ ಹಂಗು ತೊರೆದು ಭಾರತೀಯ ಸೇನೆಗೆ ಟೈಗರ್ ಹಿಲ್ ಗೆದ್ದುಕೊಟ್ಟಿದ್ದ ವೀರ ಯೋಧ ಈಗ ಸೇನೆಯ 14ನೇ ಕಾರ್ಪೋರೇಷನ್ ನ ಕಮಾಂಡಿಂಗ್ ಚೀಫ್ ಆಗಿ ನೇಮಕವಾಗಿದ್ದಾರೆ.
1999ರ ಕಾರ್ಗಿಲ್ ಯುದ್ಧದ ವೇಳೆ ಸೇನೆಯ 13ನೇ ಜಮ್ಮು ಮತ್ತು ಕಾಶ್ನೀರ ರೈಫಲ್ಸ್ ತಂಡವನ್ನು ಟೈಗರ್ ಹಿಲ್ ನಲ್ಲಿ ಯಶಸ್ವಿಯಾಗಿ ಮುನ್ನಡೆಸಿದ್ದ ಲೆಫ್ಟಿನೆಂಟ್ ಜನರಲ್ ವೈಕೆ ಜೋಷಿ ಅವರು ಇಂದು ಸೇನೆಯ 14ನೇ ಕಾರ್ಪೋರೇಷನ್ ನ ಕಮಾಂಡಿಂಗ್ ಚೀಫ್ ಆಗಿ ಅಧಿಕಾರ ಸ್ವೀಕರಿಸಿದರು. ವೈಕೆ ಜೋಷಿ ಅವರು ಲಡಾಖ್ ವ್ಯಾಪ್ತಿಯಲ್ಲಿ ಇನ್ನು ಮುಂದೆ ಸೇನೆಯನ್ನು ಮುನ್ನಡೆಸಲಿದ್ದು, ವಿಶೇಷ ಅಂಶವೆಂದರೆ ಎಂದರೆ ವೈಕೆ ಜೋಷಿ ಇಂದು ಅಧಿಕಾರ ಸ್ವೀಕರಿಸಿರುವ ಲಡಾಖ್ ಕಾರ್ಯವ್ಯಾಪ್ತಿಗೆ ಅವರು ಕಾರ್ಗಿಲ್ ಯುದ್ಧದ ವೇಳೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದ ಕಾರ್ಗಿಲ್ ಬೆಟ್ಟ ಕೂಡ ಸೇರುತ್ತದೆ.
1999ರಲ್ಲಿ ಮೇ ತಿಂಗಳಿನಲ್ಲಿ ಆರಂಭವಾಗಿದ್ದ ಕಾರ್ಗಿಲ್ ಯುದ್ಧ ಜುಲೈ ವರೆಗೂ ನಡೆದಿತ್ತು. ಭಾರತೀಯ ಸೇನೆಯ ಬಂಕರ್ ಗಳನ್ನು ವಶಪಡಿಸಿಕೊಂಡಿದ್ದ ಪಾಕ್ ಸೇನೆ ಉದ್ಧಟತನ ಮೆರೆದು ಭಾರತಕ್ಕೆ ಯುದ್ಧಾಹ್ವಾನ ನೀಡಿತ್ತು. ಅಂದು ಪಾಕಿಸ್ತಾನದ ಪಂಥಾಹ್ವಾನವನ್ನು ಸ್ವೀಕರಿಸಿದ್ದ ಭಾರತ ಯಶಸ್ವಿಯಾಗಿ ಕಾರ್ಗಿಲ್ ಬೆಟ್ಟವನ್ನು ತನ್ನ ವಶಕ್ಕೆ ಪಡೆದಿತ್ತು. ಆದರೆ ಅಂದು ಸೇನಾಧಿಕಾರಿಗಳಾದ ವಿಕ್ರಮ ಬಾತ್ರಾ, ಮನೋಜ್ ಕುಮಾರ್ ಪಾಂಡೆ, ಯೋಗೇಂದ್ರ ಸಿಂಗ್ ಯಾದವ್, ಪದ್ಮಪನಿ ಆಚಾರ್ಯ, ಸಂಜಯ್ ಕುಮಾರ್, ಸೌರಭ್ ಕಾಲಿಯಾ, ಅನೂಜ್ ನಾಯರ್ ಸೇರಿದಂತೆ ಒಟ್ಟು 453 ಭಾರತೀಯ ಯೋಧರು ಹುತಾತ್ಮರಾಗಿ, 1500ಕ್ಕೂ ಅಧಿಕ ಸೈನಿಕರ ಗಾಯಗೊಂಡಿದ್ದರು.