ದೇಶ

ಸನಾತನ್ ಸಂಸ್ಥಾ ನಿಷೇಧ ವಿಚಾರ ಕೇಂದ್ರ ಸರ್ಕಾರದ ಮುಂದಿದೆ: ಮಹಾ ಸಿಎಂ ದೇವೇಂದ್ರ ಫಡ್ನವಿಸ್

Srinivasamurthy VN
ಮುಂಬೈ: ವಿಚಾರವಾದಿಗಳ ಹತ್ಯೆ ಪ್ರಕರಣಗಳಲ್ಲಿ ಬಲವಾಗಿ ಕೇಳಿ ಬರುತ್ತಿರುವ ಸನಾತನ್ ಸಂಸ್ಥಾ ಸಂಘಟನೆಯನ್ನು ನಿಷೇಧಿಸುವ ವಿಚಾರ ಕೇಂದ್ರ ಸರ್ಕಾರದ ಮುಂದಿದೆ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ದೇವೇಂದ್ರ ಫಡ್ನವಿಸ್ ಅವರು, 'ಸನಾತನ ಸಂಸ್ಥಾ ನಿಷೇಧ ಕುರಿತ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದೆ ಬಾಕಿ ಇದೆ. ರಾಜ್ಯ ಸರ್ಕಾರ ಈಗಾಗಲೇ ಸನಾತನ ಸಂಸ್ಥಾ ನಿಷೇಧಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಿದ್ದು ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹೇಳಿದರು.
ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನದ ಅಂತಿಮ ದಿನವಾದ ನಿನ್ನೆ ವಿರೋಧಿ ಪಕ್ಷಗಳು ಈ ಕುರಿತಂತೆ ಮಂಡಿಸಿದ ನಿರ್ಣಯಕ್ಕೆ ಉತ್ತರಿಸುತ್ತ `ಈ ಹಿಂದಿನ ಮಹಾರಾಷ್ಟ್ರ ಸರ್ಕಾರ ಸನಾತನ್ ಸಂಸ್ಥಾವನ್ನು ನಿಷೇಧಿಸಲು ಸಲ್ಲಿಸಿರುವ ಪ್ರಸ್ತಾಪ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದೆ ಎಂದರು.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌.ಐ.ಟಿ) ಗೌರಿ ಹತ್ಯೆಯ ಹಿಂದೆ ಇರುವ 18 ಮಂದಿ ಆರೋಪಿಗಳು ಸಂಘಟಿತ ಅಪರಾಧ ಸಂಘಟನೆಗೆ (ಆರ್ಗನೈಸ್ಡ್ ಕ್ರೈಮ್ ಸಿಂಡಿಕೇಟ್) ಸೇರಿದ ಸಕ್ರಿಯ ಸದಸ್ಯರಾಗಿದ್ದಾರೆ ಎಂದು ಹೇಳಿದೆ. ಹಾಗೆಯೇ, ಈ ಸಂಘಟಿತ ಅಪರಾಧಿ ಸಂಘಟನೆ, ಸನಾತನ್ ಸಂಸ್ಥಾ ಪ್ರಕಟಿಸಿರುವ ಪುಸ್ತಕದಲ್ಲಿಯ `ಕ್ಷಾತ್ರ ಧರ್ಮ ಸಾಧನಾ’ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ ಎಂದೂ ವಿಶೇಷ ತನಿಖಾ ತಂಡ ಹೇಳಿದೆ.
ತನಿಖಾ ತಂಡದ ಈ ಹೇಳಿಕೆಯ ಹಿನ್ನೆಲೆಯಲ್ಲಿಯೇ ಸನಾತನ್ ಸಂಸ್ಥಾ ಸಂಘಟನೆ ನಿಷೇಧ ಕುರಿತಂತೆ ವಿರೋಧ ಪಕ್ಷಗಳು ನಿನ್ನೆ ವಿಧಾನ ಸಭೆಯಲ್ಲಿ ನಿರ್ಣಯ ಮಂಡಿಸಿದ್ದರು. ನಿನ್ನೆ ವಿಧಾನಸಭೆಯ ಚಳಿಗಾಲದ ಅಧಿವೇಶನದ ಕೊನೆಯ ದಿನವಾಗಿತ್ತು.
SCROLL FOR NEXT