ಉದಯಪುರ್: ಪ್ರಧಾನಿ ನರೇಂದ್ರ ಮೋದಿ ಅವರು 2016ರಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಅನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಮತ್ತು ಯುವಕರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ಆರೋಪಿಸಿದ್ದಾರೆ.
ಇಂದು ರಾಜಸ್ಥಾನದ ಉದಯಪುರದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿ ರಾಹುಲ್ ಗಾಂಧಿ, ಯುಪಿಎ ಸರ್ಕಾರದ ಅವಧಿಯಲ್ಲಿ 2 ಲಕ್ಷ ಕೋಟಿ ರು. ಇದ್ದ ಅನುತ್ಪಾದಕಿ ಆಸ್ತಿ (ಎನ್‌ಪಿಎ) ಈಗ ಬಿಜೆಪಿ ನೇತೃತ್ವದ ಎನ್ ಡಿಎ ಅವಧಿಯಲ್ಲಿ 12 ಲಕ್ಷ ಕೋಟಿ ರುಪಾಯಿಗೆ ಏರಿಕೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಮೋದಿ ಸರ್ಕಾರ 15 ರಿಂದ 20 ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ. ಬ್ಯಾಂಕಿಂಗ್ ವಲಯ ಕೇವಲ ಉದ್ಯಮಿಗಳಿಗೆ ಸೀಮಿತವಾಗಿದೆ ಎಂದು ದೂರಿದರು.
ಪ್ರಧಾನಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಅವಧಿಯಲ್ಲಿ ಮೂರು ಸರ್ಜಿಕಲ್ ಸ್ಟ್ರೈಕ್‌ಗಳು ನಡೆದಿದ್ದವು. ಅವುಗಳ ಬಗ್ಗೆ ಅರಿವಿದೆಯೇ? ಎಂದು ಪ್ರಶ್ನಿಸಿದ ರಾಹುಲ್, ಎನ್‌ಡಿಎ ಸರ್ಕಾರ ಕೇವಲ ಒಂದೇ ಒಂದು ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಅದನ್ನೂ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.