ದೇಶ

ತಾನು ಬೆಳೆದ 750ಕೆಜಿ ಈರುಳ್ಳಿ ಮಾರಿ 1,064 ರೂ. ಗಳಿಸಿದ ರೈತ ಆ ಹಣವನ್ನು ಏನು ಮಾಡಿದ ಗೊತ್ತಾ!

Srinivasamurthy VN
ಮುಂಬೈ: ಮಹಾರಾಷ್ಟ್ರದ ಈರುಳ್ಳಿ ಬೆಳೆಗಾರ ರೈತರೊಬ್ಬರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಸಂಜಯ್​​ ಸಾಥೆ ಎಂಬ ರೈತ ನಾಸಿಕ್​ನ ನಿಪ್ಹಾಡ್​ ನಿವಾಸಿಯಾಗಿದ್ದು, ಕೃಷಿಯಲ್ಲಿ ತಾವು ಅಳವಡಿಸಿಕೊಂಡಿದ್ದ ವೈಜ್ಞಾನಿಕತೆಯಿಂದಲೇ ಮಹಾರಾಷ್ಟ್ರದಾದ್ಯಂತ ಪ್ರಸಿದ್ಧವಾಗಿದ್ದಾರೆ. 2010ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್​ ಒಬಾಮಾ ಅವರು ಭಾರತಕ್ಕೆ ಆಗಮಿಸಿದಾಗ ಅವರೊಂದಿಗೆ ಸಂವಾದ ನಡೆಸಲೂ ಇದೇ ಸಂಜಯ್ ಸಾಥೆ ಆಯ್ಕೆಯಾಗಿದ್ದರು.
ಇಂತಹ ಸಂಜಯ್ ಸಾಥೆ ತಮ್ಮ ವೈಜ್ಞಾನಿಕ ಪದ್ಧತಿ ಮೂಲಕ ಈರುಳ್ಳಿ ಬೆಳೆ ಬೆಳೆದಿದ್ದರು. ಅವರ ಶ್ರಮಕ್ಕೆ ಪ್ರತಿಫಲ ಎಂಬಂತೆ ಉತ್ತಮ ಫಸಲು ಕೂಡ ಬಂದಿತ್ತು. ಹೀಗೆ ಬೆಳೆದ ಸುಮಾರು 750 ಕೆಜೆ ಈರುಳ್ಳಿಯನ್ನು ಮಾರಾಟ ಮಾಡಲು ಸ್ಥಳೀಯ ನಿಪ್ಹಾಡ್​ ಮಾರುಕಟ್ಟೆಗೆ ಕೊಂಡೊಯ್ದಾಗ ಅಲ್ಲಿ ಅವರಿಗೆ ಸಿಕ್ಕಿದ್ದು, ಪ್ರತೀ ಕೆ.ಜಿಗೆ ಒಂದು ರೂ. ಮಾತ್ರ. ಕೊನೆಗೆ ಕೊಸರಾಡಿ ಕೆ.ಜಿಗೆ 1.40 ರೂ.ಗಳಂತೆ ಮಾರಾಟ ಮಾಡಿದ ಸಂಜಯ್​ 750 ಕೆ.ಜಿಯಿಂದ ಒಟ್ಟಾರೆ 1064 ರೂ.ಗಳನ್ನಷ್ಟೇ ಸಂಪಾದಿಸಿದರು. ನಾಲ್ಕು ತಿಂಗಳಿಂದ ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಬೇಸತ್ತ ರೈತ ಸಂಜಯ್​ ಆ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿ ಪ್ರತಿಭಟನೆ ಮಾಡಿದ್ದಾರೆ.
1064 ರೂ.ಗಳಿಗೆ ಇನ್ನೂ 54 ರೂ.ಗಳನ್ನು ಸೇರಿಸಿ ಪ್ರಧಾನಿ ಪರಿಹಾರ ನಿಧಿಗೆ ರವಾನಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, 'ನಾಲ್ಕು ತಿಂಗಳಿಂದ ಬೆಳೆದ ಉತ್ತಮ ಫಸಲಿಗೆ ಉತ್ತಮ ಬೆಲೆ ಸಿಗದಾದಾಗ ಬಹಳ ನೋವಾಯಿತು. ಹಾಗಾಗಿ ಹಣವನ್ನು ಪ್ರಧಾನಿಗೆ ದಾನ ಮಾಡಲು ನಾನು ನಿರ್ಧರಿಸಿದೆ. ಮನಿ ಆರ್ಡರ್​ ಹಣವನ್ನೂ ಹಾಕಿ ಪ್ರಧಾನಿ ಪರಿಹಾರ ನಿಧಿಗೆ ರವಾನಿಸಿದೆ. ನಾನು ಯಾವ ಪಕ್ಷದವನೂ ಅಲ್ಲ. ಆದರೆ, ರೈತರ ಸಮಸ್ಯೆಗಳ ಬಗೆಗೆ ಮೋದಿ ಅವರ ನಿರ್ಲಕ್ಷ್ಯವನ್ನು ಖಂಡಿಸಲು ನಾನು ಹೀಗೆ ಮಾಡಿದೆ' ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸಂಜಯ್ ಸಾಥೆ ಅವರ ಈ ಕಾರ್ಯ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಕೇಂದ್ರ ಸರ್ಕಾರದ ರೈತ ನೀತಿ ಮತ್ತೆ ವಿಮರ್ಶೆಗೆ ಗುರಿಯಾಗಿದೆ.
SCROLL FOR NEXT