ಮಧ್ಯಪ್ರದೇಶ: ಕಾಂಗ್ರೆಸ್ ಗೆ ಮತ ಹಾಕಿದ್ದಕ್ಕೆ ದಲಿತ ಯುವಕನನ್ನು ಥಳಿಸಿದ ಬಿಜೆಪಿ ಅಭ್ಯರ್ಥಿ!
ಭೋಪಾಲ್: ಕಾಂಗ್ರೆಸ್ ಗೆ ಮತ ಹಾಕಿದ ಎಂಬ ಕಾರಣಕ್ಕಾಗಿ ದಲಿತ ಯುವಕನ ಮೇಲೆ ಬಿಜೆಪಿ ಅಭ್ಯರ್ಥಿ ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಸುರ್ಖಿ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ಸುಧೀರ್ ಯಾದವ್ ವಿರುದ್ಧ ದಲಿತರ ವಿರುದ್ಧ ದೌರ್ಜನ್ಯ ಎಸಗಿರುವ ಪ್ರಕರಣ ದಾಖಲಾಗಿದೆ. ಬಿಜೆಪಿ ಸಂಸದ ಲಕ್ಷ್ಮಿನಾರಾಯಣ್ ಯಾದವ್ ಅವರ ಪುತ್ರ ಸುಧೀರ್ ಯಾದವ್ ಆಗಿದ್ದು, ಕಾಂಗ್ರೆಸ್ ಗೆ ಮತ ಹಾಕಿದ್ದಕ್ಕಾಗಿ ದಲಿತ ಯುವಕ ದೀಪೇಶ್ ಅಹಿರ್ವಾರ್ ಮೇಲೆ ಹಲ್ಲೆ ನಡೆಸಿದ್ದರು.
"ನ.28 ರಂದು ನಡೆದ ಮತದಾನದ ವೇಳೆ ಮತದಾನ ಮಾಡಿ ಹೊರಬಂದಾಗ ಸುಧೀರ್ ಯಾದವ್ ಬೆಂಬಲಿಗರೊಂದಿಗೆ ಮತಗಟ್ಟೆ ಹೊರಗೆ ನಿಂತಿದ್ದರು. ನಾನು ಹೊರಬರುತ್ತಿದ್ದಂತೆಯೇ ಯಾರಿಗೆ ಮತ ಹಾಕಿದೆ ಎಂದು ಕೇಳಿದರು. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದೆ ಎಂದು ಹೇಳಿದ್ದಕ್ಕೆ ಆಕ್ರೋಶಗೊಂಡು ನನ್ನ ಹಾಗೂ ನನ್ನ ಜಾತಿ ವಿರುದ್ಧ ನಿಂದನೆಗೆ ಇಳಿದರು. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಕ್ಕಾಗಿ ನನ್ನ ಮೇಲೆ ಹಲ್ಲೆಯನ್ನೂ ನಡೆಸಿದರು" ಎಂದು ದೂರಿನಲ್ಲಿ ದೀಪೇಶ್ ಅಹಿರ್ವಾರ್ ಹೇಳಿದ್ದಾರೆ. ಘಟನೆಯನ್ನು ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ದೀಪೇಶ್ ಅಹಿರ್ವಾರ್ ಯಾದವ್ ವಿರುದ್ಧ ದೂರು ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics