ದೇಶ

ಶಬರಿಮಲೆ: ಡಿಸೆಂಬರ್ 8ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಮುಂದುವರಿಕೆ

Srinivasamurthy VN
ಕೊಚ್ಚಿ: ನಿರ್ದಿಷ್ಟ ವಯೋಮಿತಿಯ ಮಹಿಳೆಯರ ಪ್ರವೇಶವನ್ನು ನಿರಾಕರಿಸಿ ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಖ್ಯಾತ ಪವಿತ್ರ ಯಾತ್ರಾತಾಣ ಶಬರಿಮಲೆಯಲ್ಲಿ ಡಿಸೆಂಬರ್ 8ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆಯನ್ನು ಮುಂದುವರಿಸಲಾಗಿದೆ.
ಈ ಬಗ್ಗೆ ಕೇರಳ ಪೊಲೀಸ್ ವರಿಷ್ಠಾಧಿಕಾರಿಗಳು ಬುಧವಾರ ಮಾಹಿತಿ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ಶಬರಿಮಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.  ವಿಶೇಷ ಅಧಿಕಾರಿ ಮತ್ತು ಹೆಚ್ಚುವರಿ ಮ್ಯಾಜಿಸ್ಟ್ರೇಟ್‌ ಆದೇಶದ ಮೇರೆಗೆ ನಿಷೇಧಾಜ್ಞೆಯನ್ನು ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೂ ಮುನ್ನ ಶಬರಿಮಲೆ ದೇಗುಲಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ಕೇರಳ ಹೈಕೋರ್ಟ್‌ನಿಂದ ರಚಿತವಾಗಿರುವ ಮೂವರು ಸದಸ್ಯರನ್ನೊಳಗೊಂಡ ಮೇಲ್ವಿಚಾರಣ ಸಮಿತಿಯು ಇಂದು ಶಬರಿಮಲೆ ದೇಗುಲಕ್ಕೆ ಭೇಟಿ ನೀಡಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿತ್ತು.
ಶಬರಿಮಲೆ ದೇಗುಲದ ಬೆಟ್ಟದಲ್ಲಿನ ಸೌಲಭ್ಯಗಳ ಕೊರತೆ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿ ಯಾತ್ರೆಯನ್ನು ಸುಗಮಗೊಳಿಸಲು ನಿವೃತ್ತ ನ್ಯಾಯಾಧೀಶ ಪಿ ಆರ್‌ ರಮಣ್‌, ನ್ಯಾಯಾಧೀಶ ಎಸ್‌.ಸಿರಿಜಗನ್‌ ಮತ್ತು ಎಡಿಜಿಪಿ ಹೇಮಚಂದ್ರನ್‌ ಅವರನ್ನು ಸಮಿತಿಯಲ್ಲಿ ನೇಮಿಸಲಾಗಿತ್ತು.
ಎಲ್ಲ ವಯೋಮಾನದ ಮಹಿಳೆಯರಿಗೂ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಸೆಪ್ಟೆಂಬರ್‌ 28ರಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಬೆನ್ನಲ್ಲೇ ದೇಗುಲದ ಬಳಿ ಅಯ್ಯಪ್ಪ ಭಕ್ತರಿಂದ ಭಾರಿ ಪ್ರತಿಭಟನೆ ಎದುರಾಗಿತ್ತು. ಅಂದಿನಿಂದ ಇಂದಿನವರೆಗೂ ದೇಗುಲ ಪ್ರವೇಶಕ್ಕೆ ಬಂದ ಯಾವ ಮಹಿಳೆಯರಿಗೂ ಪ್ರತಿಭಟನಾಕಾರರು ಅವಕಾಶ ನೀಡದೆ ಅರ್ಧದಲ್ಲೇ ತಡೆದು ಕಳುಹಿಸಿದ್ದಾರೆ. 
SCROLL FOR NEXT