ರಾಕೇಶ್ ಅಸ್ತಾನ, ಅಲೋಕ್ ವರ್ಮಾ
ನವದೆಹಲಿ: ಅಸಾಮಾನ್ಯ ಸಂದರ್ಭಗಳಲ್ಲಿ ಅಸಾಮಾನ್ಯ ಪರಿಹಾರಗಳ ಅಗತ್ಯವಿರುತ್ತದೆ ಎಂದು ಕೇಂದ್ರ ಜಾಗೃತ ಆಯೋಗ ಸುಪ್ರೀಂಕೋರ್ಟ್ ನಲ್ಲಿ ಹೇಳಿಕೆ ನೀಡಿದೆ.
ಸಿಬಿಐ ನಿರ್ದೇಶಕ ಸ್ಥಾನದಿಂದ ರಜೆ ಮೇಲೆ ಕಳುಹಿಸಿರುವ ಕೇಂದ್ರಸರ್ಕಾರದ ನಿರ್ಧಾರ ಪ್ರಶ್ನಿಸಿ ಸಿಬಿಐ ನಿರ್ದೇಶಕ ಅಲೊಕ್ ವರ್ಮಾ ಸುಪ್ರೀಂಕೋರ್ಟ್ ನಲ್ಲಿ ದಾಖಲಿಸಿರುವ ಅರ್ಜಿ ವಿಚಾರಣೆ ವೇಳೆಯಲ್ಲಿ ಸಿವಿಸಿ ಈ ರೀತಿ ಅಭಿಪ್ರಾಯಪಟ್ಟಿದೆ.
ಸಿವಿಸಿ ಪರವಾಗಿ ವಿಷಯ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಿಬಿಐ ಆಡಳಿತ ಕಾನೂನು ಹಾಗೂ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ವಿವರಣೆ ನೀಡುತ್ತಾ, ಸಿಬಿಐ ಮೇಲಿನ ಕೇಂದ್ರ ಜಾಗೃತ ಆಯೋಗದ ಉಸ್ತುವಾರಿ ಆಚ್ಚರಿ ಹಾಗೂ ಅಸಾಮಾನ್ಯ ಸಂದರ್ಭವನ್ನು ಒಳಗೊಂಡಿದೆ ಎಂದು ಹೇಳಿದರು.
ತನಿಖಾ ಸಂಸ್ಥೆಗಳ ಹಿತದೃಷ್ಟಿಯಿಂದ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠವು ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್ ಅವರಿಗೆ ಸೂಚನೆ ನೀಡಿತು.
ಇದು ಸಿಬಿಐ ನಿರ್ದೇಶಕರ ಹಾಗೂ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ನಡುವಿನ ರಾತ್ರೋ ರಾತ್ರಿ ಉಂಟಾದ ಹೋರಾಟವಲ್ಲಾ, ಆಯ್ಕೆ ಸಮಿತಿಯೊಂದಿಗೆ ಸರ್ಕಾರ ಸಮಾಲೋಚನೆ ನಡೆಸದೆ ಬಲವಂತದಿಂದ ಸಿಬಿಐ ನಿರ್ದೇಶಕರನ್ನು ಅಧಿಕಾರದಿಂದ ವಜಾಗೊಳಿಸಲಾಗಿದೆ ಎಂದು ಉನ್ನತ ನ್ಯಾಯಾಲಯ ಹೇಳಿದೆ.