ಸಂಗ್ರಹ ಚಿತ್ರ 
ದೇಶ

ಅವನಿ ಹುಲಿ ಆಕ್ರಮಣಕಾರಿಯಾಗಿರಲಿಲ್ಲ, ಆತ್ಮರಕ್ಷಣೆಗಾಗಿ ಹತ್ಯೆ ಕುರಿತು ಶಂಕೆ ಇದೆ: ಎನ್ ಟಿಸಿಎ ಸಮಿತಿ ವರದಿ

ಅವನಿ ಹುಲಿ ಆಕ್ರಮಣಕಾರಿಯಾಗಿರಲಿಲ್ಲ. ಆದರೂ ಆತ್ಮರಕ್ಷಣೆಗಾಗಿ ಹುಲಿಯನ್ನು ಹತ್ಯೆ ಮಾಡಲಾಗಿದೆ ಎಂಬ ಹೇಳಿಕೆಯಲ್ಲಿ ಶಂಕೆ ವ್ಯಕ್ತವಾಗುತ್ತಿದೆ ಎಂದು ಹೇಳಿದೆ.

ಮುಂಬೈ: ಇಡೀ ದೇಶದ ಗಮನ ಸೆಳೆದಿದ್ದ ನರಭಕ್ಷಕ ಹೆಣ್ಣು ಹುಲಿ ಅವನಿ ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಶಂಕೆ ವ್ಯಕ್ತಪಡಿಸಿದ್ದು, ಅವನಿ ಹುಲಿ ಆಕ್ರಮಣಕಾರಿಯಾಗಿರಲಿಲ್ಲ. ಆದರೂ ಆತ್ಮರಕ್ಷಣೆಗಾಗಿ  ಹುಲಿಯನ್ನು ಹತ್ಯೆ ಮಾಡಲಾಗಿದೆ ಎಂಬ ಹೇಳಿಕೆಯಲ್ಲಿ ಶಂಕೆ ವ್ಯಕ್ತವಾಗುತ್ತಿದೆ ಎಂದು ಹೇಳಿದೆ.
ಮಹಾರಾಷ್ಟ್ರದಲ್ಲಿ ನರಭಕ್ಷಕ ಹುಲಿ ಎಂದು ಕುಖ್ಯಾತಿ ಪಡೆದಿದ್ದ ಅವನಿ ಹತ್ಯೆಗೆ ಸ್ವತಃ ನ್ಯಾಯಾಲಯವೇ ಅನುಮತಿ ನೀಡಿದ್ದರೂ, ಅದರ ಹತ್ಯೆ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಹುಲಿಯನ್ನು ಕೊಲ್ಲದೇ ಜೀವ ಸಹಿತ ಸೆರೆ ಹಿಡಿಯಬಹುದಿತ್ತು ಎಂದು ಕೆಲ ಪರಿಸರವಾದಿಗಳು ವಾದಿಸಿದ್ದರೆ ಮತ್ತೆ ಕೆಲವರು ಹುಲಿಯನ್ನು ಕೊಂದ ಪರಿಯನ್ನು ಟೀಕಿಸುತ್ತಿದ್ದರು. ಅಲ್ಲದೆ ವನ್ಯಜೀವಿ ಸಂರಕ್ಷಣಾ ಹೋರಾಟಗಾರರು ಹುಲಿ ಹತ್ಯೆಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಿದ್ದರು. 
ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ ಟಿಸಿಎ) ತನ್ನ ವರದಿ ಬಿಡುಗಡೆ ಮಾಡಿದ್ದು, ವರದಿಯಲ್ಲಿ ಅವನಿ ಹುಲಿ ಆಕ್ರಮಣಕಾರಿಯಾಗಿರಲಿಲ್ಲ. ಆದರೂ ಆತ್ಮರಕ್ಷಣೆಗಾಗಿ  ಹುಲಿಯನ್ನು ಹತ್ಯೆ ಮಾಡಲಾಗಿದೆ ಎಂಬ ಹೇಳಿಕೆಯಲ್ಲಿ ಶಂಕೆ ವ್ಯಕ್ತವಾಗುತ್ತಿದೆ ಎಂದು ಹೇಳಿದೆ. 
ಹುಲಿ ಹತ್ಯೆ ಕುರಿತ ತನ್ನ ವಿಸ್ಮೃತ ವರದಿ ಸಲ್ಲಿಕೆ ಮಾಡಿರುವ ಎನ್ ಟಿಸಿಎ, 'ಅವನಿ' ಹುಲಿಗೆ ಅತ್ಯಂತ ತರಾತುರಿಯಲ್ಲಿ ಗುಂಡು ಹಾರಿಸಲಾಗಿದೆ. ಆ ಹುಲಿಯನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಸಾಮಾನ್ಯ ಕಾರ್ಯನಿರ್ವಹಣಾ ಪ್ರಕ್ರಿಯೆಗಳನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿದೆ. ಅವನಿ ಹುಲಿ ಹತ್ಯೆ ಪ್ರಕರಣದ ತನಿಖೆಗೆ ರಚಿಸಲಾಗಿದ್ದ ತಜ್ಞರ ತಂಡವು ನೀಡಿರುವ ವರದಿಯಲ್ಲಿ ಈ ಮಾಹಿತಿ ಇದ್ದು, 'ಹುಲಿಯ ದೇಹ ಬಿದ್ದಿದ್ದ ಜಾಗ, ಅರಿವಳಿಕೆ ಚುಚ್ಚುಮದ್ದು ನಾಟಿಕೊಂಡಿದ್ದ ಭಾಗ ಮತ್ತು ಕೊನೆಯ ಕ್ಷಣಗಳಲ್ಲಿ ಹುಲಿಯ ಚಲನೆಯ ದಿಕ್ಕಿನ ವಿವರಗಳನ್ನು ಆಧಾರವಾಗಿಟ್ಟುಕೊಂಡು ಕಾರ್ಯಾಚರಣೆಯನ್ನು ಮರುಸೃಷ್ಟಿಸಲಾಯಿತು' ಎಂದು ವರದಿ ಹೇಳಿದೆ.
'ಗುಂಡಿಗೆ ಸಿಲುಕುವ ಮುನ್ನ ಹುಲಿಯು ರಸ್ತೆ ಮತ್ತು ವಾಹನಗಳಿಂದ ದೂರ ಸರಿಯುತ್ತಿತ್ತು. ಹುಲಿ ಚಲಿಸುತ್ತಿದ್ದ ದಿಕ್ಕಿನಲ್ಲೇ ಚುಚ್ಚುಮದ್ದು ಹಾರಿಸಲಾಗಿದೆ. ಇದು ಹುಲಿಯು ಹೊಂಚುಹಾಕಿರಲಿಲ್ಲ ಮತ್ತು ದಾಳಿಗೆ ಮುಂದಾಗಿರಲಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಅನನುಭವಿಯಿಂದ ಹುಲಿಗೆ ಗುಂಡು
ಇನ್ನು ಎನ್ ಟಿಸಿಎ ವರದಿಯಲ್ಲಿ ಮತ್ತೊಂದು ಪ್ರಮುಖ ಅಂಶ ಹೊರಬಿದ್ದಿದ್ದು, ಕೊಲ್ಲುವ ಆ ಸಂದರ್ಭದಲ್ಲಿ ಹುಲಿ ಅತ್ಯಂತ ಸಹಜವಾಗಿ ವರ್ತಿಸಿದೆ. ಅದನ್ನು ತಪ್ಪಾಗಿ ಅರ್ಥೈಸಿಕೊಂಡ ಅನನುಭವಿ ಅಸ್ಗರ್ ಅಲಿ ಖಾನ್ ಗುಂಡು ಹಾರಿಸಿದ್ದಾರೆ. ಅರಿವಳಿಕೆ ಚುಚ್ಚುಮದ್ದು ತಗುಲಿದ 3 ರಿಂದ 5 ಕ್ಷಣಗಳಲ್ಲೇ ಗುಂಡು ಹುಲಿಯ ದೇಹವನ್ನು ಹೊಕ್ಕಿದೆ. ಚುಚ್ಚುಮದ್ದು ಹುಲಿಯ ಮೇಲೆ ಪರಿಣಾಮ ಬೀರಿದೆಯೇ ಎಂಬುದನ್ನು ತಿಳಿದುಕೊಳ್ಳುವ ವ್ಯವಧಾನವೂ ಇಲ್ಲದೆ ಗುಂಡು ಹಾರಿಸಲಾಗಿದೆ. ಇದು ಸಾಮಾನ್ಯ ಕಾರ್ಯನಿರ್ವಹಣಾ ಪ್ರಕ್ರಿಯೆಯ ಉಲ್ಲಂಘನೆಯಾಗಿದೆ.  ಅಸ್ಗರ್ ಅಲಿ ಖಾನ್ ಅವರು ಬಳಸಿದ್ದ ಬಂದೂಕಿನ ಪರವಾನಗಿ ಇರುವುದು ಅವರ ತಂದೆ ಶಫತ್ ಅಲಿ ಖಾನ್ ಅವರ ಹೆಸರಿನಲ್ಲಿ. ಕಾರ್ಯಾಚರಣೆ ತಂಡದಲ್ಲಿ ಶಫತ್ ಅವರು ಇರಲಿಲ್ಲ. ತಮ್ಮ ಅನುಪಸ್ಥಿತಿಯಲ್ಲಿ ತಮ್ಮ ಬಂದೂಕನ್ನು ಬಳಸಲು ಅವರು ಅಸ್ಗರ್ ಅವರಿಗೆ ಅನುಮತಿ ಪತ್ರವನ್ನೂ ನೀಡಿರಲಿಲ್ಲ. ಈ ಪ್ರಕಾರ ಅಸ್ಗರ್ ಅವರು ಅನಧಿಕೃತ ಬಂದೂಕು ಬಳಸಿ ಹುಲಿಗೆ ಗುಂಡು ಹಾರಿಸಿದ್ದಾರೆ. ಹುಲಿಯನ್ನು ಜೀವಂತವಾಗಿ ಸೆರೆಹಿಡಿಯಲು ಅರಣ್ಯ ಇಲಾಖೆ ಹರಸಾಹಸಪಟ್ಟಿದೆ. ಆದರೆ ತರಬೇತಿ ಇಲ್ಲದ ಸಿಬ್ಬಂದಿಯನ್ನು ಬಳಸಿಕೊಂಡು ಅವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಕಾರ್ಯಾಚರಣೆ ನಡೆಸಿದ್ದರಿಂದಲೇ ಹುಲಿಯನ್ನು ಹಿಡಿಯಲು ಒಂದು ವರ್ಷ ಒದ್ದಾಡಬೇಕಾಯಿತು. ಕೊನೆಗೆ ಹುಲಿಯನ್ನು ಕೊಂದು ಕಾರ್ಯಾಚರಣೆಯನ್ನು ಮುಗಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಅವನಿ ಹತ್ಯೆಯ ಕುರಿತು ತನಿಖೆ ನಡೆಸುಲು ಮಹಾರಾಷ್ಟ್ರ ಅರಣ್ಯ ಇಲಾಖೆ ನವೆಂಬರ್‌ 9ರಂದು ತನಿಖಾ ಸಮಿತಿಯನ್ನು ರೂಪಿಸಿತ್ತು. ಈ ತಂಡದ ನೇತೃತ್ವವನ್ನು ಅರಣ್ಯ ಇಲಾಖೆಯ ಅಧಿಕಾರಿ ಎಸ್‌.ಎಚ್‌. ಪಾಟೀಲ್ ವಹಿಸಿದ್ದರು. ಭಾರತೀಯ ವನ್ಯಜೀವಿ ಸಂಸ್ಥೆಯ ಸದಸ್ಯ ಬಿಲಾಲ್ ಹಬೀಬ್‌, ವನ್ಯಜೀವಿ ಪ್ರಚಾರ ಟ್ರಸ್ಟ್ ನ ಸದಸ್ಯ ಅನೀಶ್‌ ಅಂದೇರಿಯಾ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ನಿತಿನ್‌ ಕಾಕೋಡ್ಕರ್‌ ತಂಡದಲ್ಲಿದ್ದರು.
ಪಂಧಾರಕವ್ಡಾ ಅರಣ್ಯ ಪ್ರದೇಶದ ಸುತ್ತಮುತ್ತಲ ನಿವಾಸಿಗಳಿಗೆ ಈ ಹುಲಿ ಎರಡು ವರ್ಷಗಳಿಂದ ಪ್ರಾಣಭೀತಿ ತರಿಸಿತ್ತು ಹಾಗೂ ಸುಮಾರು 13 ಜನರನ್ನು ಕೊಂದಿತ್ತು ಎನ್ನುವ ಆರೋಪ ಅವನಿ ಮೇಲಿತ್ತು. ಹೀಗಾಗಿ ಸುಪ್ರೀಂಕೋರ್ಟ್‌ ಕಳೆದ ಸೆಪ್ಟಂಬರ್‌ನಲ್ಲಿ ಗುಂಡಿಕ್ಕಿ ಕೊಲ್ಲುವಂತೆ ಆದೇಶ ನೀಡಿತ್ತು. ಇದನ್ನು ಜಾರಿಗೆ ತರುವಲ್ಲಿ ಅತಿ ಉತ್ಸಾಹ ತೋರಿಸಿದ ಅಲ್ಲಿಯ ಅರಣ್ಯ ಸಚಿವ ಸುಧೀರ್‌ ಮಂಗತಿವಾರ್‌, ಹತ್ಯೆ ಮಾಡಲು ಹೈದರಾಬಾದ್‌ ಮೂಲದ ಶಾರ್ಪ್‌ಶೂಟರ್‌ಗೆ ಅನುಮತಿ ನೀಡಿದ್ದರು.
ಆರಂಭದಲ್ಲಿ ಹುಲಿ ಪತ್ತೆಗೆ ನಾಯಿಗಳು, ಡ್ರೋನ್‌, ಟ್ರ್ಯಾಪ್‌ ಕ್ಯಾಮೆರಾ ಮತ್ತು ಶಾರ್ಪ್ ಶೂಟರ್‌ಗಳನ್ನು ಬಳಸಲಾಗಿತ್ತು. ಕಾರ್ಯಾಚರಣೆಯಲ್ಲಿ 200ಕ್ಕೂ ಹೆಚ್ಚು ಸಿಬ್ಬಂದಿಯನ್ನು ಬಳಸಲಾಗಿತ್ತು. ಅವನಿಯನ್ನು ಕೊಂದಿದಕ್ಕಾಗಿ ಪ್ರಾಣಿಪ್ರಿಯರಿಂದ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಆಗ ಮಹಾರಾಷ್ಟ್ರ ಅರಣ್ಯ ಸಚಿವ ಸುಧೀರ್ ಮುನಗಂಟಿವಾರ್ ಅವರು ಎನ್ ಟಿಸಿಎ ನಿಯಮಾವಳಿಗಳು ಹಾಗೂ ನ್ಯಾಯಾಲಯದ ಆದೇಶವನ್ನೇ ಪಾಲಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT