ಬಿಹಾರ: ಐಎಎಸ್ ಅಧಿಕಾರಿ ಜತೆ ಮದುವೆಗೆ 1 ದಿನ ಬಾಕಿ ಇರುವಾಗಲೇ ನಿವೃತ್ತ ಐಜಿಪಿ ಪುತ್ರಿ ಸಾವು
ಐಎಎಸ್ ಅಧಿಕಾರಿ ಜೊತೆ ಸಪ್ತಪದಿ ತುಳಿಯಬೇಕಿದ್ದ ಬಿಹಾರದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ(ಐಜಿಪಿ)ರ ವೈದ್ಯ ಪುತ್ರಿ ಮದುವೆ....
ಪಾಟ್ನಾ: ಐಎಎಸ್ ಅಧಿಕಾರಿ ಜೊತೆ ಸಪ್ತಪದಿ ತುಳಿಯಬೇಕಿದ್ದ ಬಿಹಾರದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ(ಐಜಿಪಿ)ರ ವೈದ್ಯ ಪುತ್ರಿ ಮದುವೆ ಮುನ್ನಾದಿನ 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಪಾಟ್ನಾದಲ್ಲಿ ನಡೆದಿದೆ.
ನಿವೃತ್ತ ಐಜಿಪಿ ಉಮಾಶಂಕರ್ ಸುಧಾಂಶು ಅವರ ಪುತ್ರಿ ಸ್ನಿಗ್ಧ ಅವರು ಪಾಟ್ನಾದ ಪಟೇಲ್ ನಗರದಲ್ಲಿರುವ ಉದಯಗಿರಿ ಅಪಾರ್ಟ್ ಮೆಂಟ್ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ಅದ್ಧೂರಿ ಮದುವೆಯ ಕನಸು ಕನಸಾಗಿಯೇ ಉಳಿದಿದೆ.
ಕಿಶಾನ್ ಗಂಜ್ ಜಿಲ್ಲಾಧಿಕಾರಿ ಮಹೇಂದ್ರ ಕುಮಾರ್ ಅವರೊಂದಿಗೆ ಸ್ನಿಗ್ಧ ಅವರ ಮದುವೆ ನಿಶ್ಚಯವಾಗಿತ್ತು. ಶನಿವಾರ ನಿಶ್ಚಿತಾರ್ಥ ನಡೆದಿದ್ದು, ಇಂದು ಅದ್ಧೂರಿ ಮದುವೆ ನಡೆಯಬೇಕಿತ್ತು. ಆದರೆ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಇದೊಂದು ಆತ್ಮಹತ್ಯೆ ಎನ್ನಲಾಗಿದ್ದು, ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸೇರಿದಂತೆ ಸಾವಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯೂ ಪೊಲೀಸರಿಗೆ ಸಿಕ್ಕಿಲ್ಲ.
ಕೂಡಲೇ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.