ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಟರ್ ಪೋಲ್ ಭಾರತದ ಉದ್ಯಮಿ ಮೆಹುಲ್ ಚೋಕ್ಸಿಗೆ ಗುರುವಾರ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ.
ಹಗರಣದ ಬಳಿಕ ಪ್ರಸಕ್ತ ಸಾಲಿನ ಜನವರಿ ತಿಂಗಳಿನಲ್ಲಿ ಭಾರತದಿಂದ ಪರಾರಿಯಾಗಿರುವ ಚೋಕ್ರಿ ವೆಸ್ಟ್ ಇಂಡೀಸ್'ನ ಆ್ಯಂಟಿಗುವಾ ಹಾಗೂ ಬಾರ್ಬಡೋಸ್'ನಲ್ಲಿ ನೆಲೆಸಿರುವ ಉದ್ಯಮಿ ಚೋಕ್ಸಿಗೆ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಮನವಿ ಮೇರೆಗೆ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.
ಚೋಕ್ಸಿ ಹಾಗೂ ಅವರ ಅಳಿಯ ವಜ್ರಗಳ ವ್ಯಾಪಾರಿ ನೀರವ್ ಮೋದಿ, ಭಾರತದ 2ನೇ ಅತೀದೊಡ್ಡ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೆಸರಿನಲ್ಲಿರುವ ನಕಲಿ ಗ್ಯಾರಂಟಿಗಳನ್ನು ನೀಡಿ ವಿದೇಶಗಳ ಬ್ಯಾಂಕ್ ಗಳಲ್ಲಿ ಕೋಟ್ಯಾಂತರ ರುಪಾಯಿ ಸಾಲ ಪಡೆದಿದ್ದರು. ಈ ಸಂಬಂಧ ಹಲವು ತನಿಖಾ ಸಂಸ್ಥೆಗಳು ತನಿಖೆಗಳನ್ನು ನಡೆಸುತ್ತಲೇ ಇವೆ.
ಮೆಹುಲ್ ಚೋಕ್ಸಿಗೆ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿರುವುದನ್ನು ಸಿಬಿಐ ವಕ್ತಾರ ಅಭಿಷೇಕ್ ದಯಾಳ್ ಅವರು ದೃಢಪಡಿಸಿದ್ದಾರೆ.
ಪ್ರಕರಣ ಸಂಬಂಧ ಈ ಹಿಂದೆ ಪ್ರತಿಕ್ರಿಯೆ ನೀಡಿದ್ದ ಚೋಕ್ಸಿ ನನ್ನ ರಾಜಕೀಯವಾಗಿ ಪಿತೂರಿಗಳನ್ನು ನಡೆಸಲಾಗಿದೆ ಎಂದು ಆರೋಪಿಸಿದ್ದ.