ದೇಶ

ಸುಪ್ರೀಂ ಕೋರ್ಟ್ ರಾಫೆಲ್ ವಿಮಾನದ ದರ ಪರಿಶೀಲಿಸಿಲ್ಲ, ಜೆಪಿಸಿ ತನಿಖೆಯಾಗಲಿ: ಕಾಂಗ್ರೆಸ್

Lingaraj Badiger
ನವದೆಹಲಿ: ರಾಫೆಲ್ ಯುದ್ಧ ವಿಮಾನ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಕೇಂದ್ರ ಸರ್ಕಾರ ನಿರಾಳವಾಗಿರಬಹುದು. ಆದರೆ ಸುಪ್ರೀಂ ಕೋರ್ಟ್ ವಿಮಾನ ದರ ಮತ್ತು ತಾಂತ್ರಿಕ ಅಂಶಗಳನ್ನು ಪರಿಶೀಲಿಸಿಲ್ಲ. ಜಂಟಿ ಸಂಸದೀಯ ಸಮಿತಿಯಿಂದ ಮಾತ್ರ ರಾಫೆಲ್ ವಿಮಾನದ ದರ ಮತ್ತು ಪ್ರಕ್ರಿಯೆ ಕುರಿತು ತನಿಖೆ ನಡೆಸಲು ಸಾಧ್ಯ ಎಂದು ಕಾಂಗ್ರೆಸ್ ಹೇಳಿದೆ.
ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು, ವಿಮಾನ ಖರೀದಿಯ ದರವನ್ನು ಸಂಸತ್ತಿನಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ ದರವನ್ನು ಸಿಎಜಿಗೆ ತಿಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಸುಪ್ರೀಂ ಕೋರ್ಟ್ ಸಹ ಸಿಎಜಿ ವರದಿಯನ್ನು ಸಾರ್ವಜನಿಕ ಲೆಕ್ಕಪತ್ರಗಳ ಸಂಸದೀಯ ಸಮಿತಿ ಪರಿಶೀಲಿಸಿದೆ ಎಂದು ಹೇಳಿದೆ. ಆದರೆ ಸಾರ್ವಜನಿಕ ಲೆಕ್ಕಪತ್ರಗಳ ಸಂಸದೀಯ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಮಾತ್ರ ನನಗೆ ಯಾವುದೇ ಸಿಎಜಿ ವರದಿ ಬಂದಿಲ್ಲ ಎನ್ನುತ್ತಿದ್ದಾರೆ ಎಂದು ಸಿಬಲ್ ಹೇಳಿದರು.
ಇದಕ್ಕೆ ಯಾರು ಜವಾಬ್ದಾರರು? ಸುಪ್ರೀಂ ಕೋರ್ಟ್ ಗೆ ತಪ್ಪು ಮಾಹಿತಿ ನೀಡಿದರು ಯಾರು? ಈ ಸಂಬಂಧ ಅಟಾರ್ನಿ ಜನರಲ್ ಅಫಿಡವಿಟ್ ಸಲ್ಲಿಸಿಲ್ಲವೆ? ಎಂದು ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.
ಇದೊಂದು ಗಂಭೀರ ವಿಷಯವಾಗಿದ್ದು, ಜನತೆಗೆ ತಪ್ಪು ಸಂದೇಶ ರವಾನೆಯಾಗಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
SCROLL FOR NEXT