ದೇಶ

ಮಧ್ಯಪ್ರದೇಶ: ಪ್ರಮಾಣ ವಚನ ಸ್ವೀಕರಿಸಿದ ಒಂದು ಗಂಟೆಯಲ್ಲೇ ಮುಖ್ಯಮಂತ್ರಿ ಕಮಲ್ ನಾಥ್ ರೈತರ ಸಾಲ ಮನ್ನಾ ಘೋಷಣೆ

Nagaraja AB

ಭೂಪಾಲ್ :  ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಕಮಲ್ ನಾಥ್ ಪ್ರಮಾಣ ವಚನ ಸ್ವೀಕರಿಸಿದ ಒಂದು ಗಂಟೆ ಅವಧಿಯಲ್ಲೇ  ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದಾರೆ.

 ಮಧ್ಯಪ್ರದೇಶ ಚುನಾವಣಾ ಪ್ರಚಾರ ವೇಳೆಯಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಅದರಂತೆ ತನ್ನ ಕಚೇರಿಗೆ ಆಗಮಿಸುತ್ತಿದ್ದಂತೆ ಕಮಲ್ ನಾಥ್  ರೈತರ ಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.

ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿನ 2 ಲಕ್ಷ ರೂ. ವರೆಗಿನ ಮಾರ್ಚ್ 31ರವರೆಗಿನ ರೈತರ ಸಾಲ ಮನ್ನಾ ಮಾಡಲು  ಕಮಲ್ ನಾಥ್ ಸಹಿ ಹಾಕಿದ್ದಾರೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 2 ಲಕ್ಷ ರೂ. ವರೆಗಿನ ರೈತರ ಸಾಲಮನ್ನಾ ಮಾಡಲಾಗುವುದು ಹಾಗೂ ಯುವಜನಾಂಗಕ್ಕೆ ಉದ್ಯೋಗ ನೀಡುವುದಾಗಿ ಘೋಷಣೆ ಮಾಡಲಾಗಿತ್ತು.

ಮಧ್ಯಪ್ರದೇಶದಲ್ಲಿ  ರೈತರ  ಸಾಲ ಮನ್ನಾ ಮಾಡಲಾಗಿದೆ. ಉಳಿದ  ರಾಜಸ್ತಾನ ಹಾಗೂ ಛತ್ತೀಸ್ ಗಡದಲ್ಲಿಯೂ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಮಧ್ಯಪ್ರದೇಶದ ಜನರಿಗೆ  ಉದ್ಯೋಗದಲ್ಲಿ ಶೇ, 70 ರಷ್ಟು ಮೀಸಲಾತಿ ನೀಡುವ ಕಂಪನಿಗಳಿಗೆ ಪ್ರೋತ್ಸಾಹಧನ ನೀಡುವುದಾಗಿ ಕಮಲ್ ನಾಥ್  ಹೇಳಿದ್ದಾರೆ.
ಬಿಹಾರ, ಉತ್ತರ ಪ್ರದೇಶ ಮೊದಲಾದ ರಾಜ್ಯಗಳಿಂದ ಜನರು ಉದ್ಯೋಗಕ್ಕಾಗಿ ಬರುವುದರಿಂದ ಮಧ್ಯಪ್ರದೇಶದ ಸ್ಥಳೀಯ ಜನರಿಗೆ ಉದ್ಯೋಗ ದೊರಕುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಸಂಬಂಧಿತ ಕಡತಕ್ಕೆ ಸಹಿ ಹಾಕಿರುವುದಾಗಿ ಅವರು ತಿಳಿಸಿದರು.
ರೈತರಿಗೆ ಸಾಮಾಜಿಕ ಭದ್ರತಾ ಪಿಂಚಣಿ, ಸಣ್ಣ ರೈತರ ಪುತ್ರಿಯ ಮದುವೆಗಾಗಿ 51 ಸಾವಿರ ರೂ. ಆರ್ಥಿಕ ನೆರವು ಸೇರಿದಂತೆ ಮತ್ತಿತರ ಯೋಜನೆಗಳನ್ನು  ಜಾರಿಗೆ ತರುವುದಾಗಿ ಕಾಂಗ್ರೆಸ್  ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು.
SCROLL FOR NEXT