ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಣಿಪುರದ ಬಿಜೆಪಿ ಸರ್ಕಾರವನ್ನು ಟೀಕಿಸಿದ ಆರೋಪದ ಮೇಲೆ ಇಂಫಾಲದ ಪತ್ರಕರ್ತನಿಗೆ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್ಎಸ್ಎ) ಅಡಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಯನ್ನು ಟೀಕಿಸಿದ್ದ ಸ್ಥಳೀಯ ಸುದ್ದಿವಾಹಿನಿಯ ವರದಿಗಾರ ಕಿಶೋರ್ ಚಂದ್ರ ವಾಂಗ್ ಖೆಮ್ ಅವರನ್ನು ನವೆಂಬರ್ 20ರಂದು ಎನ್ ಎಸ್ ಎ ಕಾಯ್ದೆ ಅಡಿ ಬಂಧಿಸಲಾಗಿತ್ತು. ಆರೋಪಿಯ ವಿಚಾರಣೆ ನಡೆಸಿದ ಚೀಫ್ ಜ್ಯುಡಿಸಿಯಲ್ ಮ್ಯಾಜಿಸ್ಟ್ರೇಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ ಎಂದು ರಾಜ್ಯ ಗೃಹ ಇಲಾಖೆ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.
ಎನ್ಎಸ್ಎ ಕಾಯ್ದೆ ಅಡಿ ವಿಚಾರಣೆ ಇಲ್ಲದೆಯೇ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಹೀಗಾಗಿ ಪತ್ರಕರ್ತನ ವಿರುದ್ಧ ರಾಜ್ಯ ಸರ್ಕಾರ ಮಾಡಿದ್ದ ಆರೋಪ ಪರಿಶೀಲಿಸಿದ್ದ ಎನ್ಎಸ್ಎ ಸಲಹಾ ಮಂಡಳಿಯು ಪತ್ರಕರ್ತನಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸುವಂತೆ ಶಿಫಾರಸು ಮಾಡಿತ್ತು.
ಮಣಿಪುರದ ಮುಖ್ಯಮಂತ್ರಿ ಕೇಂದ್ರ ಸರ್ಕಾರದ ಹಾಗೂ ಹಿಂದುತ್ವದ ಸೂತ್ರದ ಗೊಂಬೆ ಎಂದು ಟೀಕಿಸಿದ್ದ ವಿಡಿಯೋವನ್ನು ಕಿಶೋರ್ ಚಂದ್ರ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ ಲೋಡ್ ಮಾಡಿದ್ದರು. ಝಾನ್ಸಿ ರಾಣಿಯ ಜಯಂತಿ ಆಚರಿಸುವ ರಾಜ್ಯ ಸರ್ಕಾರದ ನಡೆಯಿಂದ ಆಘಾತವಾಗಿದೆ. ದೇಶದ ಏಕತೆಗಾಗಿನ ಕೊಡುಗೆಯನ್ನು ಗುರುತಿಸಿ ಝಾನ್ಸಿ ರಾಣಿಯ ಜಯಂತಿ ಆಚರಿಸುತ್ತಿರುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ ಆಕೆ ಮಣಿಪುರಕ್ಕಾಗಿ ಏನನ್ನೂ ಮಾಡಿಲ್ಲ. ಕೇವಲ ಕೇಂದ್ರ ಸರ್ಕಾರ ಹೇಳಿಕೆ ಎಂಬ ಮಾತ್ರಕ್ಕೆ ನೀವು ಜಯಂತಿ ಆಚರಿಸುತ್ತಿದ್ದೀರಿ ಎಂದು ವಿಡಿಯೋದಲ್ಲಿ ಕಿಶೋರ್ ಚಂದ್ರ ಹೇಳಿದ್ದರು ಎನ್ನಲಾಗಿದೆ.