ನವದೆಹಲಿ: ಬಹುತೇಕ ಪದಾರ್ಥಗಳನ್ನು ಶೇ, 18 ಜಿಎಸ್ ಟಿ ವ್ಯಾಪ್ತಿಗೆ ತರುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದ ಬೆನ್ನಲ್ಲೇ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಗಾಢ ನಿದ್ರೆಯಲ್ಲಿದ್ದ ಪ್ರಧಾನಿಯನ್ನು ಕಾಂಗ್ರೆಸ್ ಎಚ್ಚರಿಸಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಯೋಜನೆಗಳನ್ನು ಮೂರ್ಖತನದ ಚಿಂತನೆಗಳು ಎಂದು ಕರೆಯುತ್ತಿದ್ದ ಪ್ರಧಾನಿ ಈಗ ಆ ಯೋಜನೆಗಳನ್ನೇ ಅನುಷ್ಠಾನಗೊಳಿಸುತ್ತಿದ್ದಾರೆ.ಗಬ್ಬರ್ ಸಿಂಗ್ ತೆರಿಗೆ ವ್ಯವಸ್ಥೆಯಿಂದ ಗಾಡ ನಿದ್ರೆಯಲ್ಲಿದ್ದ ಪ್ರಧಾನಿಯನ್ನು ಕಾಂಗ್ರೆಸ್ ಅಂತಿಮವಾಗಿ ಎಚ್ಚರಿಸಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಶೇ. 99 ರಷ್ಟು ಪದಾರ್ಥಗಳನ್ನು ಶೇ, 18 ಜಿಎಸ್ ಟಿ ವ್ಯಾಪ್ತಿಗೆ ತರುವುದು ಸರ್ಕಾರದ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು.
ಪ್ರಧಾನಿ ಅವರ ಈ ಹೇಳಿಕೆ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಕೇಂದ್ರದ ದೂರದೃಷ್ಠಿಯ ವಿಳಂಬತೆ ಎಂದು ಪಿ. ಚಿದಂಬರಂ ಹೇಳಿಕೆ ನೀಡಿದ್ದರು. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಇಬ್ಬಗೆ, ಬೂಟಾಟಿಕೆ ರೀತಿಯಲ್ಲಿ ಮಾತನಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.