ದೇಶ

ಲೋಕಸಭೆಯಲ್ಲಿ ಡಿಸೆಂಬರ್ 27 ರಂದು ತ್ರಿವಳಿ ತಲಾಖ್ ಮಸೂದೆ ಕುರಿತ ಚರ್ಚೆ

Nagaraja AB

ನವದೆಹಲಿ: ತ್ರಿವಳಿ ತಲಾಖ್ ಮಸೂದೆ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಒಪ್ಪಿಗೆ ಸೂಚಿಸಿರುವುದರಿಂದ ಡಿಸೆಂಬರ್ 27 ರಂದು ಲೋಕಸಭೆಯಲ್ಲಿ  ಈ ಕುರಿತ ಚರ್ಚೆ ನಡೆಯಲಿದೆ.

ಮುಸ್ಲಿಂ ಮಹಿಳೆಯರ ( ವಿವಾಹ ಮೇಲಿನ ಹಕ್ಕುಗಳ ರಕ್ಷಣೆ)  ಮಸೂದೆ 2018 ಕುರಿತು ಮುಂದಿನ ವಾರ ಚರ್ಚೆಗೆ ಕೈಗೆತ್ತಿಕೊಳ್ಳುವಂತೆ ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನೀಡಿದ ಸಲಹೆಯನ್ನು  ಪರಿಗಣಿಸಲಾಗಿದೆ.

ಅಂದು ಯಾವುದೇ ತಡೆ ಇಲ್ಲದೆ ಚರ್ಚೆಗೆ ಅವಕಾಶ ನೀಡುವುದಾಗಿ ಸಂಸದೀಯ ವ್ಯವಹಾರಗಳ ಸಚಿವ ನರೇಂದ್ರ ಸಿಂಗ್ ತೋಮರ್ ಪ್ರತಿಪಕ್ಷಗಳಿಗೆ ಭರವಸೆ ನೀಡಿದ್ದಾರೆ. ಡಿಸೆಂಬರ್ 27 ರಂದು ಈ ಕುರಿತ ಚರ್ಚೆಗೆ ಕಾಂಗ್ರೆಸ್ ಹಾಗೂ ಇತರ ಎಲ್ಲಾ ರಾಜಕೀಯ ಪಕ್ಷಗಳು ಸಿದ್ದವಿದ್ದು, ಚರ್ಚೆಯಲ್ಲಿ ಪಾಲ್ಗೊಳ್ಳುವುದಾಗಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಖರ್ಗೆಯವರು ಬಹಿರಂಗವಾಗಿ ಭರವಸೆ ನೀಡಿದ್ದು, ಚರ್ಚೆ ನಡೆಸುವುದರಲ್ಲಿ ಯಾವುದೇ ತೊಂದರೆ ಇಲ್ಲ. ಶಾಂತಯುತವಾಗಿ ಚರ್ಚೆ ನಡೆಯಬೇಕೆಂದು ಒತ್ತಾಯಿಸುವುದಾಗಿ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.

ಉದ್ದೇಶಿತ  ಮಸೂದೆಯಲ್ಲಿ ತ್ರಿವಳಿ ತಲಾಖ್ ಕಾನೂನು ಬಾಹಿರವಾಗಿದ್ದು, ಇದನ್ನು ಘೋಷಿಸುವ ಪತಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಇರುತ್ತದೆ.

SCROLL FOR NEXT