ಮಹಿಳೆಯರ ಅಟ್ಟಾಡಿಸಿದ ಭಕ್ತರು
ಕೊಚ್ಚಿ: ಅಯ್ಯಪ್ಪನ ಸನ್ನಿಧಿ ಶಬರಿಮಲೆ ಭಾನುವಾರ ಅಕ್ಷರಶಃ ಹೈಡ್ರಾಮಾಕ್ಕೆ ಸಾಕ್ಷಿಯಾಗಿತ್ತು, ಪೊಲೀಸರ ಭದ್ರತೆಯಲ್ಲಿ ಅಯ್ಯಪ್ಪ ದರ್ಶನಕ್ಕೆ ಆಗಮಿಸಿದ್ದ 11 ಮಹಿಳೆಯರನ್ನು ಭಕ್ತರು ಅಟ್ಟಾಡಿಸಿ ಓಡಿಸಿದ ಘಟನೆ ನಡೆಯಿತು.
ಶತಾಯಗತಾಯ ಅಯ್ಯಪ್ಪ ದರ್ಶನ ಮಾಡುತ್ತೇವೆ ಎಂದು ಬಂದಿದ್ದ ತಮಿಳುನಾಡಿನ 'ಮಾನಿತಿ' ಸಂಘಟನೆಯ 11 ಮಂದಿ ಮಹಿಳೆಯರು ಪ್ರತಿಭಟನಾಕಾರರ ಆಕ್ರೋಶಕ್ಕೆ ಮಣಿದು ಅಯ್ಯಪ್ಪನ ದರ್ಶನ ಪಡೆಯದೇ ವಾಪಸಾಗಿದ್ದಾರೆ. ದರ್ಶನಕ್ಕೆ ಆಗಮಿಸಿದ್ದ ಮಹಿಳೆಯರನ್ನು ಅಯ್ಯಪ್ಪ ಸ್ವಾಮಿ ಭಕ್ತರು ಮಾರ್ಗ ಮಧ್ಯೆ ತಡೆದರು. ಈ ವೇಳೆ ಪೊಲೀಸರು, ಭಕ್ತರು ಮತ್ತು ಮಹಿಳಾ ಕಾರ್ಯಕರ್ತರ ನಡುವೆ ಜಟಾಪಟಿ ಹಿನ್ನೆಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಭಕ್ತರೊಂದಿಗೆ ಮಹಿಳೆಯರು ಈ ವೇಳೆ ವಾಗ್ವಾದಕ್ಕೆ ಇಳಿದಿದ್ದರು. ಈ ವೇಳೆ ಆಕ್ರೋಶಗೊಂಡ ಭಕ್ತರು ಮಹಿಳೆಯರನ್ನು ಓಡಿಸಲು ಮುಂದಾದರು. ಅಯ್ಯಪ್ಪ ದರ್ಶನ ಪಡೆದೇ ತೀರುವುದಾಗಿ ಸಂಕಲ್ಪ ತೊಟ್ಟು ಶಬರಿಮಲೆಗೆ ಆಗಮಿಸಿದ್ದ ತಮಿಳುನಾಡಿನ 'ಮಾನಿತಿ' ಸಂಘಟನೆಯ 11 ಮಹಿಳೆಯರು ಮತ್ತು ಅವರಿಗೆ ಭದ್ರತೆ ನೀಡಿದ್ದ ಪೊಲೀಸರನ್ನು ಭಕ್ತರು ಅಟ್ಟಾಡಿಸಿ ವಾಪಸ್ ಕಳುಹಿಸಿದ್ದಾರೆ.
ಭಾನುವಾರ ಬೆಳಗ್ಗೆ ಪಂಪಾ ಬೇಸ್ ಕ್ಯಾಂಪ್ ತಲುಪಿದ 50 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ 11 ಮಹಿಳೆಯರ ತಂಡವನ್ನು ಪೊಲೀಸರು ಬಿಗಿ ಭದ್ರತೆ ನಡುವೆ ದೇಗುಲದತ್ತ ಕರೆದೊಯ್ಯಲು ನಿರ್ಧರಿಸಿದ್ದರು. ಈ ವೇಳೆಗಾಗಲೇ ದಾರಿಗೆ ಅಡ್ಡಗಟ್ಟಿ ನಿಂತಿದ್ದ ಪ್ರತಿಭಟನಾಕಾರರು ಮಹಿಳಾ ಭಕ್ತರು ಮುಂದೆ ಹೋಗದಂತೆ ತಡೆದರು. ಸತತ 6 ಗಂಟೆ ಕಾಲ ಪ್ರಯತ್ನಿಸಿದರೂ 5 ಕಿ.ಮೀ. ದೂರದ ಹಾದಿಯಲ್ಲಿ 100 ಮೀಟರ್ ಸಹ ಸಾಗಲು ಅವಕಾಶ ನೀಡದೆ ಭಕ್ತರು ತಡೆದು ಹಿಮ್ಮೆಟ್ಟಿಸಿದರು. ಹಲವು ಪ್ರತಿಭಟನಾಕಾರರನ್ನು ಬಂಧಿಸುವ ಮೂಲಕ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಭಕ್ತರ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಪೊಲೀಸರು ನಿಷೇಧಾಜ್ಞೆ ವಿಧಿಸಿದ್ದರೂ ಅದಕ್ಕೆ ಯಾರೂ ಸೊಪ್ಪು ಹಾಕಲಿಲ್ಲ.
ಭಕ್ತರ ಆಕ್ರೋಶಕ್ಕೆ ಬೆಚ್ಚಿದ ಮಹಿಳೆಯರು ಮತ್ತು ಪೊಲೀಸರು ತಮ್ಮನ್ನು ರಕ್ಷಿಸಿಕೊಳ್ಳಲು ಅಕ್ಷರಶಃ ದಿಕ್ಕಾಪಾಲಾಗಿ ಓಡಿದರು. ಹತ್ತಿರದ ಗಾರ್ಡ್‌ರೂಂಗೆ ತೆರಳಿ ಅಡಗಿಕೊಂಡರು. ಕೊನೆಗೆ ದೇಗುಲದತ್ತ ಸಾಗುವ ಯೋಜನೆಯನ್ನೇ ಕೈಬಿಟ್ಟು ಮಹಿಳಾ ಭಕ್ತರನ್ನು ವಾಪಸ್ ಕಳುಹಿಸಿದರು.